Home ಜಿಲ್ಲೆ ಕಲಬುರಗಿ ಅಧಿಕಮಾಸದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನಂತ ಪುಣ್ಯ: ಡಾ. ಕೃಷ್ಣ ಕಾಕಲವಾರ

ಅಧಿಕಮಾಸದಲ್ಲಿ ಧಾರ್ಮಿಕ ಕಾರ್ಯಗಳಿಗೆ ಅನಂತ ಪುಣ್ಯ: ಡಾ. ಕೃಷ್ಣ ಕಾಕಲವಾರ

ಕಲಬುರಗಿ: ಮೇ 16:ಅಧಿಕಮಾಸದಲ್ಲಿ ಮಾಡುವ ಎಲ್ಲಾ ಧಾರ್ಮಿಕ ಹಾಗೂ ಸತ್ಕಾರ್ಯಗಳಿಗೆ “ಅಧಿಕಸ್ಯ ಅಧಿಕ ಫಲಂ” ಎಂಬಂತೆ ಅಪಾರ ಪುಣ್ಯಫಲ ದೊರೆಯುತ್ತದೆ ಎಂದು ನಿವೃತ್ತ ಸಂಸ್ಕøತ ಪ್ರಾಧ್ಯಾಪಕರಾದ ಡಾ. ಕೃಷ್ಣ ಕಾಕಲವಾರ ಹೇಳಿದರು.

ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ್ ಮಂದಿರದಲ್ಲಿ ಅಧಿಕಮಾಸದ ಪ್ರಾರಂಭದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗವಂತನಾದ ಶ್ರೀಮನ್ನಾರಾಯಣನೇ ಪುರುಷೋತ್ತಮನಾಗಿ ಅಧಿಕಮಾಸದ ಅಧಿಪತಿಯಾಗಿದ್ದಾನೆ ಎಂದು ತಿಳಿಸಿದರು.
ಅಧಿಕಮಾಸದ ಅವಧಿಯಲ್ಲಿ ಪ್ರತಿಯೊಬ್ಬರೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಪ್ರಾತಃಕರ್ಮಗಳನ್ನು ನೆರವೇರಿಸಿ ಜಪ, ತಪ, ಪಾರಾಯಣಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.ಶ್ರೀಮದ್ಭಾಗವತ, ರಾಮಾಯಣ, ಮಹಾಭಾರತ ಹಾಗೂ ಹರಿಕಥಾಮೃತಸಾರದಂತಹ ಪವಿತ್ರ ಗ್ರಂಥಗಳ ಶ್ರವಣದಿಂದ ಆತ್ಮಶುದ್ಧಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಮಹಿಳೆಯರು ಪ್ರತಿದಿನ ರಂಗೋಲಿ ಬಿಡಿಸುವುದು, ತುಪ್ಪದ ದೀಪ ಹಚ್ಚುವುದು ಹಾಗೂ ಭಜನೆ ಮಾಡುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ ಎಂದು ವಿವರಿಸಿದರು. ಅಧಿಕಮಾಸವು ಅತ್ಯಂತ ಶ್ರೇಷ್ಠವಾದ ಮಾಸವಾಗಿದ್ದು, ಪ್ರಾಚೀನ ಭಾರತೀಯ ಗಣಿತ ಮತ್ತು ಖಗೋಳ ವಿಜ್ಞಾನದ ಆಧಾರದ ಮೇಲೆ ಮೂರು ವರ್ಷಗಳಿಗೊಮ್ಮೆ ಬರುತ್ತದೆ ಎಂದು ತಿಳಿಸಿದರು. ಸೂರ್ಯ ಮತ್ತು ಚಂದ್ರರ ಪರಿಕ್ರಮಣದ ವ್ಯತ್ಯಾಸದಿಂದ ವರ್ಷಕ್ಕೆ ಸುಮಾರು 11 ದಿನಗಳ ಅಂತರ ಉಂಟಾಗುವುದರಿಂದ ಮೂರು ವರ್ಷಗಳಿಗೊಮ್ಮೆ ಅಧಿಕಮಾಸ ಬರುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀ ಅವಿನಾಶ್ ಕುಲಕರ್ಣಿ, ವಿನುತ ಜೋಶಿ, ಶಂಕರರಾವ್ ಸಿಂದಗಿಕರ್, ಕಿಶನರಾವ್ ಕುಲಕರ್ಣಿ, ಲಕ್ಷ್ಮಿಕಾಂತ್ ಕುಲಕರ್ಣಿ, ಮುರಳಿಧರರಾವ್ ಕುಲಕರ್ಣಿ, ನಸಿರ್ಂಗರಾವ್ ಕುಲಕರ್ಣಿ, ವಿಶ್ವಾಸ್ ಮೋಘೇಕರ್, ಸಿ.ವಿ. ಜೋಶಿ, ಪ್ರಸನ್ನ ದೇಶಪಾಂಡೆ, ಶ್ರೀಷಾ ಕುಲಕರ್ಣಿ, ಅರ್ಚಕರಾದ ಪ್ರದ್ಯುಮ್ನಾಚಾರ್ಯ ಜೋಶಿ, ವೆಂಕಟೇಶಾಚಾರ್ಯ ನೇಲೋಗಿ, ವ್ಯವಸ್ಥಾಪಕರಾದ ಚಂದ್ರಕಾಂತ ಕಡೆಗಂಚಿ, ಸವಿತಾ ಕುಲಕರ್ಣಿ, ವೀಣಾ ಸತ್ಕೇಡ್, ಗೋದಾವರಿ ಕುಲಕರ್ಣಿ, ವನಮಾಲ ಓಂಕಾರ, ಕವಿತಾ ಶರ್ಮಾ ಸೇರಿದಂತೆ ಭಜನಾ ಮಂಡಳಿ, ಪಾರಾಯಣ ಸಂಘ, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.