ವಿಶೇಷ ಸಂಸತ್ ಅಧಿವೇಶನಕ್ಕೆ ಐಎನ್‌ಡಿಐಎ ಒತ್ತಡ

ನವದೆಹಲಿ,ಜೂ.೩:ಜಮ್ಮು-ಕಾಶ್ಮೀರದ ಪೆಹಲ್ಗಾಮ್ ದಾಳಿಯ ನಂತರ ನಡೆದ ಆಪರೇಷನ್‌ಸಿಂಧೂರ ಮತ್ತು ನಂತರದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ (ಇಂಡಿಯಾ) ಒಕ್ಕೂಟ ಸಂಸತ್‌ನ ವಿಶೇಷ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ಇಂದು ದೆಹಲಿಯಲ್ಲಿ ಸಭೆ ನಡೆಸಿದೆ. ವಿಪಕ್ಷಗಳ ಎಲ್ಲ ಸಂಸದರ ಸಹಿ ಇರುವ ಪತ್ರವನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಿ ಅಧಿವೇಶನ ಕರೆಯಲು ಒತ್ತಡ ಹೇರುವ ನಿರ್ಧಾರವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


ಸಂಸತ್‌ನ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಸೇರಿದಂತೆ ಐಎನ್‌ಡಿಐಎ ಬಣದ ಪಕ್ಷಗಳ ಮುಖ್ಯಸ್ಥರುಗಳು ಈಗಾಗಲೇ ಮೋದಿ ಅವರಿಗೆ ಪತ್ರ ಬರೆದಿದ್ದರೂ ಪ್ರಧಾನಿ ಮೋದಿ ಅವರು ಸಂಸತ್ ಅಧಿವೇಶನ ಕರೆಯಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಸಂಸತ್ ಅಧಿವೇಶನವನ್ನು ಕರೆಯಲು ಕೇಂದ್ರದ ಮೇಲೆ ಯಾವ ರೀತಿ ಒತ್ತಡ ಹೇರಬೇಕು ಯಾವ ಕಾರ್ಯತಂತ್ರವನ್ನು ರೂಪಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳು ನಡೆದಿವೆ.


ಪೆಹಲ್ಗಾಮ್ ದಾಳಿ ಆಪರೇಷನ್‌ಸಿಂಧೂರ ಈ ಎಲ್ಲದರ ಬಗ್ಗೆಯೂ ಚರ್ಚಿಸಲು ಸಂಸತ್‌ನ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಸೇರಿದಂತೆ ಎಲ್ಲ ವಿಪಕ್ಷಗಳು ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿವೆ.


ಎಐಸಿಸಿ ಅಧ್ಯಕ್ಷ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ, ಸಮಾಜವಾದಿ ಪಕ್ಷ,ಸಿಪಿಎಂ-ಸಿಪಿಐ, ಆರ್‌ಜೆಡಿ ಸೇರಿದಂತೆ ಹಲವು ವಿಪಕ್ಷಗಳ ನಾಯಕರುಗಳು ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದುಅಧಿವೇಶನ ಕರೆಯಲು ಒತ್ತಾಯಿಸಿದ್ದಾರೆ. ವಿಶೇಷ ಅಧಿವೇಶನ ಕರೆಯುವ ತಮ್ಮ ಸಾಮೂಹಿಕ ಮತ್ತು ತುರ್ತು ವಿನಂತಿಯನ್ನು ಪುನರುಚ್ಛರಿಸುವ ಪತ್ರವನ್ನು ಸಿದ್ಧಪಡಿಸಿ ಅದಕ್ಕೆ ವಿಪಕ್ಷಗಳ ಎಲ್ಲ ಸಂಸದರ ಸಹಿ ಹಾಕಿಸಿ ಅದನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲು ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.


ಪೆಹಲ್ಗಾಮ್ ಭಯೋತ್ಪಾದನಾ ದಾಳಿ ಆಪರೇಷನ್‌ಸಿಂಧೂರ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕದನ ವಿರಾಮ ಘೋಷಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಚರ್ಚಿಸಲು ಸಂಸತ್‌ನ ವಿಶೇಷ ಅಧಿವೇಶನ ಕರೆಯಬೇಕು ಎಂದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ರೂಪಿಸಬೇಕಾದ ಕಾರ್ಯತಂತ್ರದ ಬಗ್ಗೆ ಐಎನ್‌ಡಿಐಎ ಸಭೆಯಲ್ಲಿ ಚರ್ಚೆಗಳು ನಡೆದಿವೆ.


ಸಂಸದರಿಂದ ಪತ್ರ ನಿರ್ಧಾರ
ಇಂದಿನ ಐಎನ್‌ಡಿಐಎ ಸಭೆಯಲ್ಲಿ ಸಂಸತ್‌ನ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿ ಪ್ರಧಾನಿ ಮೋದಿ ಅವರಿಗೆ ವಿಪಕ್ಷಗಳ ಎಲ್ಲ ಸಂಸದರ ಸಹಿ ಇರುವ ಪತ್ರವನ್ನು ಕಳುಹಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.


ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದ ಮುಖವಾಡವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲು ಬಹುಪಕ್ಷಗಳ ಸಂಸದರ ನಿಯೋಗಗಳು ವಿದೇಶಗಳಿಗೆ ತೆರಳಿ ಮಾಹಿತಿ ನೀಡುತ್ತಿರುವ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ವಿರೋಧ ಪಕ್ಷಗಳು ಈ ಬಗ್ಗೆಯೂ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮುಂದಾಗಿವೆ.


ವಿಪಕ್ಷಗಳ ಆಗ್ರಹಕ್ಕೆ ಪ್ರಧಾನಿ ಮೋದಿ ಅವರು ಮಣಿಯದೆ ಇರುವುದು ವಿಪಕ್ಷಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ವಿಶೇಷ ಸಂಸತ್ ಅಧಿವೇಶನವನ್ನು ಕರೆಯಲು ಯಾವ ರೀತಿ ಒತ್ತಡ ಹೇರಬೇಕು ಎಂಬ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ.