ನಾಳೆ ಫೈನಲ್
ದುಬೈ, ಸೆ. ೨೭: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ೪೧ ವರ್ಷಗಳ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಇದೇ ಮೊದಲ ಬಾರಿ ಎದುರಾಗುತ್ತಿವೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಭಾರತೀಯ ಕಾಲಮಾನ ರಾತ್ರಿ ೮ಕ್ಕೆ ಆರಂಭವಾಗಲಿರುವ ಪಂದ್ಯ ಉಭಯ ದೇಶಗಳ ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದೆ.
ಗುಂಪು ಹಂತ ಹಾಗೂ ಸೂಪರ್ ೪ ಹಂತದ ಎಲ್ಲಾ ಆರು ಪಂದ್ಯಗಳಲ್ಲಿ ಜಯ ಗಳಿಸಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ಅಜೇಯ ದಾಖಲೆಯೊಂದಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಅತ್ತ ಗುಂಪು ಹಂತ ಮತ್ತು ಸೂಪರ್ ಫೋರ್ ಹಂತದಲ್ಲಿ ತಲಾ ಒಂದು ಪಂದ್ಯವನ್ನು ಸೋತಿರುವ ಎರಡು ಬಾರಿಯ ಚಾಂಪಿಯನ್ ಪಾಕಿಸ್ತಾನ, ಆರನೇ ಬಾರಿ ಫೈನಲ್ ಪ್ರವೇಶಿಸಿದೆ.
ಒಟ್ಟಾರೆ ೮ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಟೀಮ್ ಇಂಡಿಯಾ, ಟೂರ್ನಿಯ ಏಕದಿನ ಮತ್ತು ಟಿ೨೦ ಎರಡೂ ಮಾದರಿಗಳು ಸೇರಿ ೧೨ನೇ ಭಾರಿ ಫೈನಲ್ ಪ್ರವೇಶಿಸಿದ್ದು, ಟೂರ್ನಿಯ ಅತ್ಯಂತ ಯಶಸ್ವಿ ತಂಡವಾಗಿದೆ.
ಪಾಕಿಸ್ತಾನ ವಿರುದ್ಧ ಕಳೆದೆರಡು ಪಂದ್ಯಗಳಲ್ಲಿ ಪ್ರಾಬಲ್ಯ ಸಾಧಿಸಿರುವ ಭಾರತ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಇಡೀ ಟೂರ್ನಿಯಲ್ಲಿ ಇದುವರೆಗೂ ತನ್ನ ನೈಜ ಪ್ರದರ್ಶನ ನೀಡಲು ವಿಫಲಗೊಂಡಿರುವ ಭಾರತ, ಅಪಾಯಕಾರಿ ಪಾಕಿಸ್ತಾನ ತಂಡವನ್ನು ಸೋಲಿಸಬೇಕಾದರೆ ತನ್ನ ಗತವೈಭವನ್ನು ಉಣಬಡಿಸಬೇಕಿದೆ.
ಅಭಿಷೇಕ್ ಶರ್ಮ, ಶುಬ್ಮನ್ ಗಿಲ್ ಸೇರಿದಂತೆ ಕೆಲವೇ ಆಟಗಾರರ ಬ್ಯಾಟಿಂಗ್ ನೆಚ್ಚಿಕೊಂಡಿರುವ ಭಾರತ, ಬೌಲಿಂಗ್ ನಲ್ಲೂ ವೇಗಿ ಜಸ್ ಪ್ರಿತ್ ಬುಮ್ರಾ, ಅರ್ಷ್ ದೀಪ್ , ವರಣ್ ಚಕ್ರವರ್ತಿ ಅವರನ್ನು ಅವಲಂಭಿಸಿದೆ. ಒಂದು ವೇಳೆ ಇವರು ವೈಫಲ್ಯಕ್ಕೆ ಒಳಗಾದರೆ, ಟೀಮ್ ಇಂಡಿಯಾದ ಇತರ ಆಟಗಾರರು ಒತ್ತಡಕ್ಕೆ ಸಿಲುಕುವ ಸಾಧ್ಯತೆ ಇದೆ.
ಮತ್ತೊಂದೆಡೆ ಟೂರ್ನಿಯುದ್ದಕ್ಕೂ ಕ್ಷೇತ್ರ ರಕ್ಷಣೆಯ ವೈಫಲ್ಯದ ಹೊರತಾಗಿಯೂ ಫೈನಲ್ ಪ್ರವೇಶಿಸಿರುವ ಭಾರತ, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸುಧಾರಿಸಿಕೊಳ್ಳದಿದ್ದರೆ ಸೂಕ್ತ ದಂಡ ತೆರಬೇಕಾಗುತ್ತದೆ.
ಶ್ರೀಲಂಕಾ ವಿರುದ್ಧದ ಸೂಪರ್ ೪ ಹಂತದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿರುವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಫೈನಲ್ ಗೂ ಮುನ್ನ ಅವರ ಲಭ್ಯತೆಯನ್ನು ತಿಳಿಸುವುದಾಗಿ ಬೌಲಿಂಗ್ ಮಾರ್ನೆ ಮಾರ್ಕೆಲ್ ತಿಳಿಸಿದ್ದಾರೆ.
ಸೇಡಿಗೆ ಕಾದಿರುವ ಪಾಕಿಸ್ತಾನ: ಟೀಮ್ ಇಂಡಿಯಾದ ಹಸ್ತಲಾಘವ ನಿರಾಕರಣೆಯಿಂದ ತೀವ್ರ ಮುಖಭಂಗ ಅನುಭವಿಸಿರುವ ಪಾಕಿಸ್ತಾನ, ಭಾರತ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಹಿಂದಿನ ಎರಡು ಸೋಲುಗಳ ಜತೆಗೆ ಟೂರ್ನಿಯಲ್ಲಿ ಅನುಭವಿಸಿದ ಹಿನ್ನಡೆಯಿಂದ ಹೊರಬರಲು ಕಾತರಿಸುತ್ತಿದೆ.
ಪಂದ್ಯಗಳ ವೇಳೆ ಆಂಗಿಕ ವರ್ತನೆಗೆ ಐಸಿಸಿಯಿಂದ ದಂಡಕ್ಕೆ ಒಳಗಾಗಿರುವ ಪಾಕಿಸ್ತಾನ ಆಟಗಾರರು, ಪ್ರಶಸ್ತಿ ಗೆದ್ದು, ಭಾರತೀಯರಿಗೆ ಆಘಾತ ನೀಡಲು ಎದುರು ನೋಡುತ್ತಿದ್ದಾರೆ. ಆದರೆ ತನಗಿಂತ ಎಲ್ಲಾ ವಿಭಾಗಗಳಲ್ಲಿ ಬಲಾಢ್ಯ ತಂಡವಾಗಿರುವ ಭಾರತವನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಪಂದ್ಯ ಆರಂಭ : ರಾತ್ರಿ ೮ಕ್ಕೆ (ಸೆ.೨೮)
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣ, ದುಬೈ
ನೇರ ಪ್ರಸಾರ: ಸೋನಿ ನೆಟ್ವರ್ಕ್
ತಂಡಗಳ ವಿವರ
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶುಬ್ಮನ್ ಗಿಲ್, ಅಭಿಷೇಕ್ ಶರ್ಮ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ ಪ್ರಿತ್ ಬುಮ್ರಾ, ಅರ್ಷ್ ದೀಪ್ ಸಿಂಗ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್
ಪಾಕಿಸ್ತಾನ: ಸಲ್ಮಾನ್ ಆಘಾ(ನಾಯಕ), ಫಾಹೀಮ್ ಆಶ್ರಫ್, ಫಖರ್ ಜಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಜ್, ಹುಸೇನ್ ತಲಾತ್, ಖುಶ್ ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಶಾಹಿಬ್ಜಾದಾ ಫರ್ಹಾನ್, ಸೈಮ್ ಆಯುಬ್, ಶಾಹೀನ್ ಆಫ್ರಿದಿ, ಸುಫಿಯಾನ್ ಮಕೀಮ್, ಮೊಹಮ್ಮದ್ ವಾಸಿಂ ಜೂನಿಯರ್, ಸಲ್ಮಾನ್ ಮಿರ್ಜಾ.
೧೫ ಮುಖಾಮುಖಿ
೧೧ ಭಾರತ ಗೆಲುವು
೩ ಪಾಕಿಸ್ತಾನ ಜಯ
೧ ಟೈ
ಟಿ-೨೦ ರಾಂಕಿಂಗ್
ಭಾರತ (೦೧)
ಪಾಕಿಸ್ತಾನ (೦೭)
























