
ವಿಜಯಪುರ, ಡಿ. 12: ಕೃಷಿ, ರಕ್ಷಣೆ, ಹೊಟೇಲ್ ಉದ್ಯಮ, ಸಾಫ್ಟ್ವೇರ್ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಭಾರತವು ಆತ್ಮನಿರ್ಭರವಾಗಬೇಕು ಎಂಬುದು ಪ್ರಸ್ತುತ ಅಗತ್ಯವಾಗಿದ್ದು, ಮಹಿಳೆಯರು ದೇಶದ ಆರ್ಥಿಕತೆಯ ಪ್ರಮುಖ ಶಕ್ತಿಯಾಗಬೇಕು ಎಂದು ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜೈವಿಕ ಮಾಹಿತಿ ಅಧ್ಯಯನ ವಿಭಾಗ ಹಾಗೂ ಇತಿಹಾಸ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಪ್ರಧಾನ ಮಂತ್ರಿ ಉಚ್ಛತರ ಶಿಕ್ಷಾ ಅಭಿಯಾನ ಪಿ. ಎಮ್. ಉಷಾ ಉನ್ನತ ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ನೆರವಿನೊಂದಿಗೆ ಇತ್ತೀಚಿಗೆ ಹಮ್ಮಿಕೊಂಡಿದ್ದ “ಆತ್ಮನಿರ್ಭರ ಭಾರತದಲ್ಲಿ ಮಹಿಳಾ ಉದ್ಯಮಶೀಲತೆ ಅವಕಾಶಗಳು, ಕೌಶಲ್ಯಗಳು ಮತ್ತು ಕಾರ್ಯತಂತ್ರಗಳು” ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೈವಿಕ ಮಾಹಿತಿ, ಜೈವಿಕ ತಂತ್ರಜ್ಞಾನ ಹಾಗೂ ಇತಿಹಾಸ ವಿಭಾಗಗಳ ವಿದ್ಯಾರ್ಥಿನಿಯರು ಈ ತರಬೇತಿಯ ಸದುಪಯೋಗ ಪಡೆದು ತಮ್ಮ ಬದುಕಿನಲ್ಲಿ ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು, ಅಷ್ಟೇ ಅಲ್ಲದೇ ಕೌಶಲ್ಯಾಭಿವೃದ್ಧಿ ಮೂಲಕ ಮಹಿಳೆಯರು ಹೊಸ ಉದ್ಯಮ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾದ ಅಪಾರ ಸಾಧ್ಯತೆಗಳಿವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ಬಸವರಾಜ ಮೇಟಿ ಮಾತನಾಡಿ, ವಿದ್ಯಾರ್ಥಿನಿಯರು ಇಂದಿನ ಯುಗದಲ್ಲಿ ಕೇವಲ ಸರ್ಕಾರಿ ಉದ್ಯೋಗಕ್ಕೆ ಸೀಮಿತವಾಗದೆ ಉದ್ಯಮಿಗಳಾಗಲು ಮುಂದಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರೆತು ಏಳು ದಶಕಗಳಾದರೂ, ರಕ್ಷಣಾ ಉತ್ಪಾದನೆ, ಆಹಾರ ಭದ್ರತೆ, ತಂತ್ರಜ್ಞಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾವು ಇನ್ನೂ ಬೇರೆ ದೇಶಗಳ ಮೇಲೆಯೇ ಅವಲಂಬಿತರಾಗಿದ್ದೇವೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ‘ಆತ್ಮನಿರ್ಭರ ಭಾರತ’ ಅಭಿಯಾನವನ್ನು ಆರಂಭಿಸಿದೆ, ಉತ್ತಮ ಕೌಶಲ್ಯಗಳೊಂದಿಗೆ ವಿದ್ಯಾರ್ಥಿನಿಯರು ನವೋದ್ಯಮ ಮತ್ತು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಧೈರ್ಯದಿಂದ ಮುಂದಾಗಬೇಕೆಂದರು. ಇಂದಿಗೂ ದೇಶದಲ್ಲಿ ಪ್ರಾರಂಭವಾಗಿರುವ ಅನೇಕ ಎಮ್‍ಎಸ್‍ಎಮ್‍ಇಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೇವಲ ಶೇ.12 ರಷ್ಟಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ. ಜಾಯ್. ಹೊಸಕೆರಿ, ಡಾ.ಎಮ್.ಎಸ್. ಮುಜಾವರ, ಡಾ.ಚಂದ್ರಕಲಾ ಹಳ್ಳಿ, ಗುರುರಾಜ ಬಮ್ಮನಹಳ್ಳಿ, ಹಾಗೂ ಸಂಶೋಧನಾ ವಿಧ್ಯಾರ್ಥಿಗಳು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಮತ್ತು ಜೈವಿಕ ಮಾಹಿತಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಬಾಬು. ಆರ್. ಎಲ್. ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಪೆÇ್ರ.ನಾಗರಾಜ ಎಮ್. ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಆಸ್ಮಾ ಬೇದರೆಕರ ನಿರೂಪಿಸಿದರು.

























