
ಮುಂಬೈ,ಅ.೯- ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭಾರತ-ಇಂಗ್ಲೆಂಡ್ ದ್ವಿಪಕ್ಷೀಯ ಸಂಬಂಧಗಳು ಹೊಸ ಎತ್ತರವನ್ನು ತಲುಪುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ “ಪ್ರಧಾನಿ ಕೀರ್ ಸ್ಟಾರ್ಮರ್ ಅವರ ನೇತೃತ್ವದಲ್ಲಿ, ಭಾರತ ಮತ್ತು ಇಂಗ್ಲೆಂಡ್ ಸಂಬಂಧಗಳು ಗಮನಾರ್ಹ ಪ್ರಗತಿ ಕಂಡಿವೆ. ಈ ವರ್ಷದ ಜುಲೈನಲ್ಲಿ, ಇಂಗ್ಲೆಂಡ್ ಭೇಟಿಯ ಸಮಯದಲ್ಲಿ, ಐತಿಹಾಸಿಕ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ” ಎಂದು ಅವರು ಹೇಳಿದ್ದಾರೆ.
ಭಾರತದ ಪ್ರವಾಸದಲ್ಲಿರುವ ಇಂಗ್ಲೆಂಡ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಮುಂಬೈನಲ್ಲಿ ನಡೆದ ಚರ್ಚೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದಿದ್ದಾರೆ.
ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ, ಇದುವರೆಗಿನ ಶಿಕ್ಷಣ ವಲಯದ ಅತಿದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ನಿಯೋಗ. ಇಂಗ್ಲೆಂಡ್‌ನ ಒಂಬತ್ತು ವಿಶ್ವವಿದ್ಯಾಲಯಗಳು ಈಗ ಭಾರತದಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ತೆರೆಯಲು ಸಿದ್ಧವಾಗಿವೆ ಎಂಬುದು ಬಹಳ ಸಂತೋಷದ ವಿಷಯ” ಎಂದು ತಿಳಿಸಿದ್ದಾರೆ.
ಭಾರತ-ಇಂಗ್ಲೆಂಡ್ ಒಪ್ಪಂದ ಎರಡೂ ದೇಶಗಳ ನಡುವಿನ ಆಮದು ವೆಚ್ಚ ಕಡಿಮೆ ಮಾಡುತ್ತದೆ, ಯುವಕರಿಗೆ ಹೊಸ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಮತ್ತು ಕೈಗಾರಿಕೆಗಳು ಮತ್ತು ಗ್ರಾಹಕರಿಗೆ ಪ್ರಯೋಜನ ನೀಡುತ್ತದೆ ಎಂದು ಹೇಳಿದ್ದಾರೆ.
“ಒಪ್ಪಂದಕ್ಕೆ ಸಹಿ ಹಾಕಿದ ಕೆಲವೇ ತಿಂಗಳುಗಳಲ್ಲಿ ಭಾರತಕ್ಕೆ ಇಂಗ್ಲೆಂಡ್ ಪ್ರಧಾನಿ ಆಗಮಿಸಿದ್ಧಾರೆ. ಈ ಭೇಟಿಯೊಂದಿಗೆ ಅತಿದೊಡ್ಡ ವ್ಯಾಪಾರ ನಿಯೋಗ ಆಗಮಿಸಿದೆ, ಇದು ಹರ್ಷದ ಸಂಗತಿ. ಭಾರತ-ಇಂಗ್ಲೆಂಡ್ ಪಾಲುದಾರಿಕೆಯಲ್ಲಿ ಹೊಸ ಚೈತನ್ಯದ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ.

































