ನಗರದಲ್ಲಿ ಹೆಚ್ಚಿದ ಸಂಚಾರ ದಟ್ಟಣೆ: ಪಾಲಿಕೆ ಸಭೆಯಲ್ಲಿ ಗಂಭೀರ ಚರ್ಚೆ

ಹುಬ್ಬಳ್ಳಿ, ಮೇ 31: ನಗರದ ಜನತೆ ರೋಸಿಹೋಗುವಂತೆ ಮಾಡಿರುವ ನಗರದಲ್ಲಿನ ಸಂಚಾರ ದಟ್ಟಣೆ ಮತ್ತು ಫುಟ್‍ಪಾತ್‍ಗಳ ಮೇಲೆ ವಾಹನಗಳ ಯರ್ರಾಬಿರ್ರಿ ನಿಲುಗಡೆ ಸೃಷ್ಟಿಸುತ್ತಿರುವ ಸಮಸ್ಯೆ ಕುರಿತು ಇಂದು ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ ಮತ್ತಿತರರು ಸಭೆಯ ಆರಂಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಸಮಸ್ಯೆಯ ಗಂಭೀರತೆಯನ್ನು ಸಭೆಯ ಗಮನಕ್ಕೆ ತಂದರು.

ದಿನನಿತ್ಯವೂ ನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಾರದಷ್ಟು ತೀವ್ರವಾಗುತ್ತಿದೆ. ಅವಳಿನಗರ ದಿನೇದಿನೇ ಬೆಳೆಯುತ್ತಿದೆ. ಎಲ್ಲೆಲ್ಲಿ ಸಂಚಾರ ದಟ್ಟಣೆ ತೀವ್ರವಾಗಿ ಕಾಣಿಸಿಕೊಳ್ಳುತ್ತಿದೆಯೋ ಅಲ್ಲಲ್ಲಿ ರಸ್ತೆಗಳನ್ನು ಅಗಲೀಕರಣ ಮಾಡಬೇಕು, ಫುಟ್‍ಪಾತ್‍ಗಳ ಮೇಲೆ ವಾಹನಗಳ ನಿಲುಗಡೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಕೊಳ್ಳಬೇಕು ಇತ್ಯಾದಿ ಅಭಿಮತಗಳು ಸಭೆಯಲ್ಲಿ ವ್ಯಕ್ತವಾದವು.

ತೆರಿಗೆ ಕಟ್ಟುವವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂಬ ಧ್ವನಿ ಸಭೆಯಲ್ಲಿ ಕೇಳಿ ಬಂದಿತು. ಮೇಯರ್ ರಾಮಪ್ಪ ಬಡಿಗೇರ್ ಅವರ ಅನುಪಸ್ಥಿತಿಯಲ್ಲಿ ಉಪಮಹಾಪೌರರಾದ ದುರ್ಗಮ್ಮ ಬಿಜವಾಡ ಅವರು ಮೇಯರ್ ಸ್ಥಾನದಲ್ಲಿದ್ದರು.