ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚಳ: ಕ್ರಮಕ್ಕೆ ಒತ್ತಾಯ

ಚಿಕ್ಕನಾಯಕನಹಳ್ಳಿ, ಸೆ. ೬- ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಯೋಜನಾ ಸಮಿತಿ ತಾಲ್ಲೂಕು ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಆಗ್ರಹಿಸಿದರು.


ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಾರ್ಯಾಲಯದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದ್ದು, ತಾಲ್ಲೂಕಿನಲ್ಲಿ ೨೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ೨ಸಾವಿರಕ್ಕೂ ಹೆಚ್ಚು ಪ್ರಕರಣಗಳು ನಡೆದಿವೆ ಎಂದು ಶಾಸಕರು ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರವನ್ನು ಪ್ರಶ್ನಸಿದ್ದರು. ಈ ಬಗ್ಗೆ ಯಾವುದೇ ಆಕ್ಷೇಪಣೆ ಇರುವುದಿಲ್ಲ. ಆದರೆ, ತಾಲ್ಲೂಕಿನಲ್ಲೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಮೂರು ತಿಂಗಳಿಂದ ತಾಲ್ಲೂಕಿನಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದು, ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮೇಲೆ ಈ ರೀತಿಯಾದ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಶಾಸಕರು, ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಈ ಬಗ್ಗೆ ಸಂಘಟನಾ ಜವಾಬ್ದಾರಿ ವಹಿಸಿಕೊಂಡು ಮುಂದೆ ಈ ರೀತಿಯಾದ ಪ್ರಕರಣಗಳು ನಡೆಯದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.


ಸಿಡಿಪಿಒ ಹೊನ್ನಪ್ಪ ಮಾತನಾಡಿ, ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಬಗ್ಗೆ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ವಸತಿ ಶಾಲೆಗಳಲ್ಲಿ ಬಾಲ್ಯವಿವಾಹ , ಪೋಕ್ಸೋ ಆಕ್ಟ್‌ಗಳ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಅರಿವು ಮೂಡಿಸುತ್ತಿದ್ದೇವೆ. ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಅರಿವು ಮೂಡಿಸುತ್ತಿದ್ದೇವೆ. ಪ್ರೇಮ ಪ್ರಕರಣಗಳಿಂದಾಗಿ ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನಲ್ಲಿ ಈಗಾಗಲೇ ೩ ಎಫ್‌ಐಆರ್ ಗಳನ್ನು ದಾಖಲು ಮಾಡಿದ್ದೇವೆ ಎಂದರು.


ಡಿಪೋ ನಿರ್ವಾಹಕ ತಮ್ಮಯ್ಯ ಮಾತನಾಡಿ, ತಾಲ್ಲೂಕಿಗೆ ಡಿಪೋ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕು. ಈ ಬಗ್ಗೆ ರೈತರ ಬಳಿ ಮಾತನಾಡಿ ಜಮೀನು ನೊಂದಾವಣಿ ಮಾಡಿಕೊಳ್ಳಬೇಕು. ತಾಲ್ಲೂಕಿನ ಹಲವು ಹಳ್ಳಿಗಳಿಗೆ ಕಿರಿದಾದ ರಸ್ತೆ ಇರುವುದರಿಂದ ಬಸ್ ಮಾರ್ಗ ಕಲ್ಪಿಸಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.


ಸಭೆಯಲ್ಲಿ ಹಾಜರಿದ್ದ ಗ್ಯಾರಂಟಿ ಯೋಜನಾ ಸಮಿತಿಯ ಸದಸ್ಯರು, ಪಡಿತರವನ್ನು ೧ ರಿಂದ ೩೦ ರವರೆಗೂ ನೀಡಬೇಕು, ದೇವಾಲಯಗಳಲ್ಲಿ ದೇವದಾತಿ ಪದ್ಧತಿ ಕಾನೂನುಬಾಹಿರವೆಂಬ ನಾಮಫಲಕವನ್ನು ಅಳವಡಿಸಬೇಕು ಹಾಗೂ ಹಳ್ಳಿಗಳಿಗೆ ಸೂಕ್ತ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕು ಎಂದು ಸಲಹೆ ನೀಡಿದರು.