
ನವದೆಹಲಿ, ಜೂ.೧- ದೇಶದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸಂಖ್ಯೆಗಳು ಗಣನೀಯವಾಗಿ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೩,೩೯೫ ಕ್ಕೆ ತೀವ್ರವಾಗಿ ಏರಿಕೆಯಾಗಿದ್ದು ಕಳೆದ ೨೪ ಗಂಟೆಗಳಲ್ಲಿ ನಾಲ್ಕು ಮಂದಿ ಸಾವನ್ನಪಿದ್ದಾರೆ, ಇದರೊಂದಿಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆತಂಕ ಹೆಚ್ಚುವಂತೆ ಮಾಡಿದೆ.
ಕೇರಳದಲ್ಲಿ ಅತಿಹೆಚ್ಚು ಸೋಂಕು ಧೃಡಪಟ್ಟಿದ್ದು ೧೩೩೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಅವರೆಲ್ಲಾ ಚಿಕಿತ್ಸೆ ಪಡೆಯುತ್ತಿದ್ದಾರೆ ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ೪೬೭ ಮತ್ತು ದೆಹಲಿಯಲ್ಲಿ ೩೭೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿಯೂ ಸೋಂಕು ಹೆಚ್ಚುತ್ತಿದ್ದ ಆತಂಕ ಸೃಷ್ಟಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕೇರಳ, ಮಹಾರಾಷ್ಟ್ರ, ದೆಹಲಿ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ೨೪ ಗಂಟೆಗಳಲ್ಲಿ ಕೋವಿಡ್ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ೬೮ ಪರೀಕ್ಷೆ ಪಾಸಿಟಿವ್ ಪ್ರಕರಣಗಳಿವೆ ಎಂದು ತಿಳಿಸಿದೆ.\
ಕಳೆದ ೨೪ ಗಂಟೆಗಳಲ್ಲಿ ಭಾರತದಲ್ಲಿ ನಾಲ್ಕು ಕೋವಿಡ್ ಸಂಬಂಧಿತ ಸಾವುಗಳು ವರದಿಯಾಗಿವೆ ಮೃತ ವ್ಯಕ್ತಿಗಳು ದೆಹಲಿ, ಕೇರಳ, ಕರ್ನಾಟಕ ಮತ್ತು ಉತ್ತರ ಪ್ರದೇಶದವರಾಗಿದ್ದು ಕಳೆದ ೨೪ ಗಂಟೆಗಳಲ್ಲಿ ೧,೪೩೫ ಜನರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಸೋಂಕಿನ ತೀವ್ರತೆ ಕಡಿಮೆಯಾಗಿದೆ, ಹೆಚ್ಚಿನ ರೋಗಿಗಳು ಮನೆಯ ಆರೈಕೆಯಲ್ಲಿದ್ದಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ ಜನರು ಆತಂಕ ಪಡುವುದು ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಮಹಾರಾಷ್ಟ್ರದಲ್ಲಿ ೪೬೭ ಸಕ್ರಿಯ ಪ್ರಕರಣಗಳ ನಡುವೆ ರಾಜ್ಯದಲ್ಲಿ ೬೮ ಹೊಸ ಕೋವಿಡ್ ೧೯ ಪ್ರಕರಣಗಳನ್ನು ವರದಿ ಮಾಡಿದೆ. ಹೊಸ ಪ್ರಕರಣಗಳಲ್ಲಿ, ೩೦ ಮುಂಬೈನಲ್ಲಿ ಮತ್ತು ೧೫ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಮಿತಿಯಲ್ಲಿ ಪತ್ತೆಯಾಗಿವೆ. ಕಲ್ಯಾಣ್-ಡೊಂಬಿವಲಿ ಮತ್ತು ರಾಯಗಡದಲ್ಲಿಯೂ ಪ್ರಕರಣಗಳು ಪತ್ತೆಯಾಗಿವೆ.
ಒಡಿಶಾದಲ್ಲಿ ಇನ್ನೂ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಏಳಕ್ಕೆ ತಲುಪಿದೆ ಎಂದು ಆರೋಗ್ಯ ಕಾರ್ಯದರ್ಶಿ ಅಶ್ವತಿ ಎಸ್ ತಿಳಿಸಿದ್ದಾರೆ. ಜನರು ಭಯಭೀತರಾಗದಂತೆ ಒತ್ತಾಯಿಸುತ್ತಾ, ಎಲ್ಲಾ ರೋಗಿಗಳ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.
ಎಚ್ಚರಿಕೆ ವಹಿಸಲು ಕರ್ನಾಟಕ ಸೂಚನೆ
ಕರ್ನಾಟಕ ಆರೋಗ್ಯ ಇಲಾಖೆಯು ಜನರು ಗಾಬರಿ ಆಗದೆ, ಜಾಗರೂಕರಾಗಿರುವ ಜೊತೆಗೆ ಸೋಂಕು ಮತ್ತಷ್ಟು ಹರಡುವಿಕೆ ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆ ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳೊಂದಿಗೆ ಕೆಲಸ ಮಾಡಲು ಕೇಳಿಕೊಂಡಿದೆ.
ಕೋವಿಡ್ ಉಲ್ಬಣದ ಮಧ್ಯೆ ಶಾಲೆಗಳಿಗೆ ನಿರ್ದೇಶನ ನೀಡಿದೆ, ಜೂನ್‌ನಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮುಂಜಾಗ್ರತೆ ವಹಿಸುವಂತೆ ಸೂಚಿಸಿದೆ.
ಕೋವಿಡ್ ಸೋಂಕಿನಿಂದ ೬೩ ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇತ್ತೀಚಿನ ಉಲ್ಬಣದ ನಡುವೆ ಕರ್ನಾಟಕದಲ್ಲಿ ಕೋವಿಡ್-ಸಂಬಂಧಿತ ಸಾವುಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಜನದಟ್ಟಣೆ ಇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಉತ್ತಮ ನೈರ್ಮಲ್ಯವನ್ನು ಪಾಲಿಸುವ ಮೂಲಕ ಜನರು ಜವಾಬ್ದಾರಿಯುತ ನಡವಳಿಕೆ ಅಭ್ಯಾಸ ಮಾಡಬೇಕೆಂದು ಕರ್ನಾಟಕ ಆರೋಗ್ಯ ಇಲಾಖೆ ಸಾರ್ವಜನಿಕ ಸಲಹೆ ನೀಡಿದೆ.