ಮೂರು ವಂದೇ ಭಾರತ್ ರೈಲು ಸಂಚಾರಕ್ಕೆ ಮೋದಿ ಹಸಿರು ನಿಶಾನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೧೦:ಇಂದು ಬೆಂಗಳೂರಿನಲ್ಲಿರುವ ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಸೇರಿದಂತೆ ಮೂರು ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿ ಬೆಂಗಳೂರು ನಾಗರಿಕರ ಬಹುದಿನದ ನಿರೀಕ್ಷೆಯಾಗಿದ್ದ ನಮ್ಮ ಮೆಟ್ರೊ ಹಳದಿ ಮಾರ್ಗವನ್ನು ಲೋಕಾರ್ಪಣೆಗೊಳಿಸಿ ೩ನೇ ಹಂತದ ಬೆಂಗಳೂರು ಮೆಟ್ರೊಗೂ ಶಂಕುಸ್ಥಾಪನೆ ನೆರವೇರಿಸಿದರು.
ಆಧುನಿಕ ನಗರಕ್ಕೆ ನವಪೀಳಿಗೆಯ ಸಂಚಾರ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರಮೋದಿ ಅವರು ಬಿಜೆಪಿ ಕಾರ್ಯಕರ್ತರ ಭವ್ಯ ಸ್ವಾಗತದ ನಡುವೆಯೇ ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ತೆರಳಿ ಬೆಂಗಳೂರು-ಬೆಳಗಾವಿ-ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿ ವರ್ಚುಯಲ್ ಮೂಲಕ ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಖತ್ರಾ, ನಾಗ್ಪುರ-ಪುಣೆ ವಂದೇ ಭಾರತ್ ರೈಲು ಸಂಚಾರವನ್ನು ಉದ್ಘಾಟಿಸಿದರು.
ವಂದೇ ಭಾರತ್ ರೈಲನ್ನು ಅದ್ಧೂರಿಯಾಗಿ ಹೂವಿನಿಂದ ಸಿಂಗರಿಸಲಾಗಿತ್ತು. ಪ್ರಧಾನಿ ಮೋದಿ ಅವರು ರೈಲಿನ ಒಳ ಹೋಗಿ ರೈಲು ಪ್ರಯಾಣಿಕರು ಹಾಗೂ ಮಕ್ಕಳೊಂದಿಗೆ ಕೆಲಕಾಲ ಸಂವಾದ ನಡೆಸಿ, ಅವರಿಂದ ರೈಲಿನ ಪ್ರಯಾಣದ ಅನುಭವದ ಮಾಹಿತಿಗಳನ್ನು ಪಡೆದುಕೊಂಡರು.
ನಾಳೆಯಿಂದ ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಆರಂಭವಾಗಲಿದ್ದು, ಬುಧವಾರ ಹೊರತುಪಡಿಸಿ ವಾರದ ೬ ದಿನ ರೈಲಿನ ಸಂಚಾರ ಇರಲಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ಜತೆ ರಾಜ್ಯಪಾಲ ಥಾವರ್‌ಚಂದ್‌ಗೆಲ್ಹೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯಸಚಿವ ಎಚ್.ಡಿ ಕುಮಾರಸ್ವಾಮಿ, ಕೇಂದ್ರದ ನಗರಾಭಿವೃದ್ಧಿ ಸಚಿವ ಮನೋಹರ್‌ಲಾಲ್ ಖಟ್ಟರ್, ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯಸಚಿವ ವಿ. ಸೋಮಣ್ಣ, ಕೇಂದ್ರದ ಸಣ್ಣ ಕೈಗಾರಿಕಾ ರಾಜ್ಯ ಸಚಿವೆ ಶೋಭಾಕರಂದ್ಲಾಜೆ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್, ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಭಾಗಿಯಾದರು.
ಪ್ರಧಾನಿ ಮೋದಿ ಅವರು ಚಾಲನೆ ನೀಡಿದ ಬೆಳಗಾವಿ-ಬೆಂಗಳೂರು ೧೧ನೇ ವಂದೇ ಭಾರತ್ ಎಕ್ಸ್‌ಪ್ರಸ್ ರೈಲಾಗಿದೆ.

ಮೆಟ್ರೊದಲ್ಲಿ ಸಂಚರಿಸಿ ಹಳದಿ ಮಾರ್ಗಕ್ಕೆ ಚಾಲನೆ
ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ನಂತರ ಪ್ರಧಾನಿ ನರೇಂದ್ರಮೋದಿ ಅವರು ಆರ್‌ವಿ ರಸ್ತೆಯ ರಾಗಿಗುಡ್ಡ ಮೆಟ್ರೊ ನಿಲ್ದಾಣಕ್ಕೆ ತೆರಳಿ ಹಳದಿ ಮಾರ್ಗದ ಮೆಟ್ರೊ ರೈಲಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯವರೆಗೂ ಪ್ರಯಾಣಿಸಿ ಮೆಟ್ರೊದ ಹಳದಿ ಮಾರ್ಗವನ್ನು ಲೋಕಾರ್ಪಣೆಗೊಳಿಸಿದರು.
ಇದಾದ ನಂತರ ಎಲೆಕ್ಟ್ರಾನಿಕ್ ಸಿಟಿಯ ಐಐಐಟಿ ಕೇಂದ್ರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮೆಟ್ರೊ ಹಂತ-೩ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಬೆಂಗಳೂರು ಮೆಟ್ರೊ ೩ನೇ ಹಂತದ ಈ ಯೋಜನೆ ೪೪.೬೫ ಕಿ.ಮೀ. ಉದ್ದವಿದ್ದು, ಮೆಟ್ರೊ ಹಂತ-೩ಕ್ಕೆ ಸುಮಾರು ೧೫ ಸಾವಿರ ಕೋಟಿ ರೂ. ವೆಚ್ಚವಾಗಲಿದೆ.
ಮೆಟ್ರೊ ಹಂತ-೩ರಲ್ಲಿ ಜೆಪಿ ನಗರದಿಂದ ಕೆಂಪಾಪುರದವರೆಗೆ ಮತ್ತು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ.
ಇಂದು ಪ್ರಧಾನಿಯವರು ಲೋಕಾರ್ಪಣೆ ಮಾಡಿದ ಬೆಂಗಳೂರು ಮೆಟ್ರೊ ಹಳದಿ ಮಾರ್ಗ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ೧೯.೧೫ ಕಿ.ಮೀ ಉದ್ದವಿದ್ದು, ಸುಮಾರು ೭,೧೬೦ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಳದಿ ಮಾರ್ಗ ಲೋಕಾರ್ಪಣೆಯಿಂದ ಮೆಟ್ರೊ ರೈಲು ೯೬ ಕಿ.ಮೀ.ಗಳಿಗೆ ವಿಸ್ತರಣೆಗೊಳ್ಳಲಿದೆ.
ಪ್ರಧಾನಿಗೆ ಭವ್ಯ ಸ್ವಾಗತ
ವಂದೇಭಾರತ್ ರೈಲು ಮೆಟ್ರೊ ಹಳದಿ ಮಾರ್ಗದ ಲೋಕಾರ್ಪಣೆ, ಮೆಟ್ರೊ ೩ನೇ ಹಂತದ ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಇಂದು ಬೆಳಿಗ್ಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರಮೋದಿ ಅವರನ್ನು ರಾಜ್ಯಪಾಲ ಥಾವರ್‌ಚಂದ್‌ಗೆಲ್ಹೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಗಣ್ಯರು ಬರಮಾಡಿಕೊಂಡರು.
ಕಾರ್ಯಕರ್ತರಲ್ಲಿ ಸಂಭ್ರಮ, ಹರ್ಷದ ಸ್ವಾಗತ, ಪ್ರಧಾನಿ ನರೇಂದ್ರಮೋದಿ ಎಚ್‌ಎಎಲ್ ವಿಮಾನನಿಲ್ದಾಣದಿಂದ ಮೇಖ್ರಿ ವೃತ್ತದ ಬಳಿ ಇರುವ ವಾಯು ನೆಲೆಗೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ದಾರಿಯುದ್ದಕ್ಕೂ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿ ಮೋದಿ ಪರ ಜೈಕಾರ ಕೂಗಿ ಬಿಜೆಪಿ ಬಾವುಟಗಳನ್ನು ಪ್ರದರ್ಶಿಸಿ ಮೋದಿ ಅವರ ಕಾರಿನ ಮೇಲೆ ಹೂಮಳೆಗೈದು ಅದ್ಧೂರಿ ಸ್ವಾಗತ ಕೋರಿದರು. ಪ್ರಧಾನಿ ಮೋದಿ ಸಹ ಕಾರ್ಯಕರ್ತರ ಸಂತಸಕ್ಕೆ ಸ್ಪಂದಿಸಿ ಕಾರ್ಯಕರ್ತರಿಗೆ ಕೈ ಬೀಸಿ, ಕೈ ಮುಗಿದು ಅವರ ಸಂಭ್ರಮದಲ್ಲಿ ಭಾಗಿಯಾದರು.
ಮೆಟ್ರೊ ಹಳದಿ ಮಾರ್ಗ ಲೋಕಾರ್ಪಣೆ ಮಾಡಿ ಮೆಟ್ರೊ ರೈಲಿನಲ್ಲಿ ಪ್ರಧಾನಿ ಮೋದಿ ಅವರು ಸಂಚರಿಸಿದ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿಯವರೆಗಿನ ಮೆಟ್ರೊದ ಎಲ್ಲ ನಿಲ್ದಾಣಗಳಲ್ಲೂ ಬಿಜೆಪಿ ಕಾರ್ಯಕರ್ತರು ಬಿಜೆಪಿಯ ಬಾವುಟ ಹಿಡಿದು ಮೋದಿ ಪರ ಜೈಕಾರ ಕೂಗಿ ಸಂಭ್ರಮಿಸಿದರು.
ಪ್ರಧಾನಿ ನರೇಂದ್ರಮೋದಿ ಅವರ ಬೆಂಗಳೂರು ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮೋದಿ ಅವರ ದೊಡ್ಡ ದೊಡ್ಡ ಫ್ಲೆಕ್ಸ್‌ಗಳನ್ನು ಹಾಕಲಾಗಿದ್ದು, ಎಲ್ಲೆಡೆ ಬಿಜೆಪಿ ಬಾವುಟಗಳನ್ನು ಕಟ್ಟಲಾಗಿದೆ. ಇಡೀ ನಗರ ಮೋದಿಮಯವಾಗಿರುವಂತೆ ಭಾಸವಾಯಿತು.

























