
ಕೋಲಾರ,ಡಿ,೨೮- ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ ಆಯೋಜಿಸುವ ಹಲವಾರು ಸಮಾಜೋಪಯೋಗಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತೋಷದ ವಿಷಯ. ಸಂಸ್ಥೆಯು ಜನರಿಗೆ ಅನುಕೂಲವಾಗುವಂತಹ ಉತ್ತಮ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿದರು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ನಟೇಶ್. ಆರ್. ತಿಳಿಸಿದರು.
ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ – ಕೋಲಾರ ಹಾಗೂ ಯಂಗ್ ಸ್ಟಾರ್ ಗ್ರೂಪ್, ಹಾವೇರಿ ಮೊಹಲ್ಲಾ, ಕೋಲಾರ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಹಾಗೂ ಸಂಸ್ಥೆಯ ಕಚೇರಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರೂ ಕಾನೂನುಗಳನ್ನು ಪಾಲಿಸುವುದು ಅತ್ಯಗತ್ಯ. ವಿವಾಹಕ್ಕೆ ಸಂಬಂಧಿಸಿದಂತೆ ಮಹಿಳೆಯರಿಗೆ ೧೮ ವಷ ಹಾಗೂ ಪುರುಷರಿಗೆ ೨೧ ವಷ ಪೂರೈಸಿದ ನಂತರವೇ ವಿವಾಹ ಮಾಡಬೇಕು ಮುಂದಿನ ದಿನಗಳಲ್ಲಿ ಇನ್ನಷ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಕೈಜೋಡಿಸಲಿ ಎಂದು ಶುಭ ಹಾರೈಸಿದರು.
ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಶಮ್ಸ್ ಎಂ.ಬಿ. ಮಾತನಾಡಿ, ನಮ್ಮ ಸಂಸ್ಥೆ ಸ್ಥಾಪನೆಯಾಗಿ ನಾಲ್ಕು ವಷಕ್ಕಿಂತ ಹೆಚ್ಚು ಕಾಲವಾಗಿದೆ. ಈ ಅವಧಿಯಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ, ಕಾನೂನು ಅರಿವು ಕಾರ್ಯಕ್ರಮಗಳು, ಗಿಡ ನೆಡುವ ಅಭಿಯಾನ, ಪ್ಲಾಸ್ಟಿಕ್ ಮುಕ್ತ ಅಭಿಯಾನ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
ಕಾರ್ಯದರ್ಶಿ ಮುಸ್ತಫಾ ಪಾಷ ಎಸ್.ವೈ. ಮಾತನಾಡಿ, ಸಂಸ್ಥೆಯ ಕಚೇರಿ ಉದ್ಘಾಟನೆಯೊಂದಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಬೇಕು, ಅಪರಾಧಗಳಿಂದ ದೂರವಿರಬೇಕು ಹಾಗೂ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂಬುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಮನ ಮಹಿಳಾ ಸಮೂಹದ ಶಾಂತಮ್ಮ, ನಿರೂಪಕಿ ಹಾಗೂ ಗಾಯಕಿ ಮಂಜುಳಾ, ನಾರಾಯಣಸ್ವಾಮಿ (ಮಾತೆನಹಳ್ಳಿ), ಹೂಹಳ್ಳಿ ನಾಗರಾಜ್, ಸಲೀಂ (ಬೀದಿಬದಿ ವ್ಯಾಪಾರಿಗಳ ಜಿಲ್ಲಾ ಅಧ್ಯಕ್ಷರು), ನಗರಸಭೆ ಸದಸ್ಯ ಹಿದಾಯತ್ ಉಲ್ಲಾ, ಆದಿಲ್, ಕಾರ್ಮಿಕರ ಜಿಲ್ಲಾ ಅಧ್ಯಕ್ಷ ಸಮೀರ್, ಆರೋಗ್ಯನಾಥ ಭಾಗವಹಿಸಿದ್ದರು.


























