
ಹುಳಿಯಾರು, ನ. ೨೨- ರಾಷ್ಟ್ರೀಯ ಸೇವಾ ಯೋಜನೆಯು ಸೆಪ್ಟೆಂಬರ್ ೨೪ ೧೯೬೯ ರಲ್ಲಿ ಮಹಾತ್ಮಗಾಂಧಿ ಜನ್ಮ ಶತಮಾನೋತ್ಸವ ಸ್ಮರಣಾರ್ಥವಾಗಿ ಜಾರಿಯಾಗಿ ದೇಶಾದ್ಯಂತ ಸೇವಾ ಮನೋಭಾವವನ್ನು ಬೆಳೆಸಿ ಆ ಮೂಲಕ ದೇಶ ನಿರ್ಮಾಣ ಮತ್ತು ಸಮಾಜ ಹಿತ ಕಾಯುವ ಒಂದು ಕಲ್ಯಾಣ ಕಾರ್ಯಕ್ರಮವಾಗಿದೆ ಎಂದು ಮಿಡಿಗೇಶಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಮಂಜು ಭಾರ್ಗವಿ ಹೇಳಿದರು.
ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಮನಸ್ಸಿನಲ್ಲಿ ಸಾವಿರಕ್ಕೂ ಹೆಚ್ಚು ಕ್ರಿಯಾಶೀಲ ಕಾರ್ಯಗಳನ್ನು ಈ ಯೋಜನೆಯ ಮೂಲಕ ಸೇವೆ ಮಾಡಬಹುದಾಗಿದ್ದು, ಸ್ವಾಸ್ಥ್ಯ ಸಮಾಜದ ಕನಸನ್ನು ನನಸು ಮಾಡಲು ಈ ಯೋಜನೆ ಸಹಾಯಕವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ. ಮಾತನಾಡಿ, ಈ ಯೋಜನೆ ಯುವ ಮನಸ್ಸುಗಳಲ್ಲಿ ಉತ್ಸಾಹದ ಬುಗ್ಗೆಯನ್ನು ತುಂಬುವ, ನಾಯಕತ್ವದ ಗುಣಗಳನ್ನು ಬೆಳೆಸುವ, ಜಾಗೃತಿ ಮೂಡಿಸುವ ಮುಂದಾಳು, ಈ ಯೋಜನೆಯಾಗಿದ್ದು ಬದುಕಿನ ಭಾಗವಾದಾಗ ಮಾತ್ರ ಯೋಜನೆ ಸಾಕಾರವಾಗಬಲ್ಲದು ಎಂದು ಹೇಳಿದರು.
ಕಾರ್ಯಕ್ರಮಾಧಿಕಾರಿ ರಮೇಶ್ ಎಸ್. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಅದು ಔಪಚಾರಿಕ ಯೋಜನೆ ಮಾತ್ರವಲ್ಲ ಅದೊಂದು ಜವಾಬ್ದಾರಿ. ಇಂತಹ ಜವಾಬ್ದಾರಿ ಶಿಬಿರಗಳಿಗೆ ಮಾತ್ರ ಸೀಮಿತವಾಗಬಾರದು ಶಿಬಿರಾರ್ಥಿಯ ಕಣ ಕಣದಲ್ಲೂ ಜವಾಬ್ದಾರಿ ಅಡಗಿರಬೇಕು ಎಂದರು.
ಕಾರ್ಯಕ್ರಮಾಧಿಕಾರಿ ಲಕ್ಷ್ಮೀ ಎಸ್. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯೆಯ ಜತೆಗೆ ಸೇವಾ ಪರಿಕಲ್ಪನೆಯು ವಿದ್ಯಾರ್ಥಿಗಳಲ್ಲಿ ಬೆಳೆಯುವ ಹಿತದೃಷ್ಟಿಯಿಂದ ಇದ್ದು ಸೇವಾ ಮನೋಭಾವ ಇದ್ದವರು ಶಾಶ್ವತ ಹೆಸರುಗಳಿಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ.ಸರಸ್ವತಿ ಕೆ.ಬಿ., ಶೈಕ್ಷಣಿಕ ಮುಖ್ಯ ಸಲಹೆಗಾರರಾಗಿ ಡಾ.ಸುಷ್ಮಾ.ಎಲ್ ಬಿರಾಧರ್, ಡಾ.ಸಂಗೀತಾ ಪಿ, ಜಯಪ್ರಕಾಶ್, ಕುಮಾರಸ್ವಾಮಿ ಕೆ.ಸಿ. ಚಂದ್ರಹಾಸ್, ಬಿ.ಆರ್. ರಾಜ್ಯಶಾಸ್ತ್ರ ಉಪನ್ಯಾಸಕರಾದ ತಿಪ್ಪೇಸ್ವಾಮಿ ಎಂ.ಕೆ. ಉಪಸ್ಥಿತರಿದ್ದರು.

























