
ಚನ್ನಮ್ಮನ ಕಿತ್ತೂರ,ಜೂ 22: ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು ಸರಕಾರದ ಯೋಜನೆಗಳು ಜನತೆಗೆ ಸಮರ್ಪಕವಾಗಿ ತಲುಪಿಸಲು ಉತ್ತಮ ಆಡಳಿತ ಕೇಂದ್ರ ಅವಶ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಸಮೀಪದ ಇಟಗಿ ಗ್ರಾಮದ ನೂತನ ಗ್ರಾಪಂ ಕಟ್ಟಡ ಮತ್ತು ಸಭಾ ಭವನ ಲೋಕಾರ್ಪಣೆಗೊಳಿಸಿ ಉದ್ಘಾಟಿಸಿ ಮಾತನಾಡಿ ಇಟಗಿ ಗ್ರಾಮ ಪಂಚಾಯತಿಯ ಆಡಳಿತ ಮಂಡಳಿ ಸುಸಜ್ಜಿತ ಮತ್ತು ಅತ್ಯಾಧುನಿಕ ಸುಂದರ ಕಟ್ಟಡವನ್ನು ನಿರ್ಮಿಸುವ ಮೂಲಕ ಮಾದರಿಯಾಗಿದ್ದು, ಜನತೆಗೆ ಸಕಾಲದಲ್ಲಿ ತ್ವರಿತವಾಗಿ ವಿವಿಧ ಸೇವೆಗಳು ಲಭ್ಯವಾಗಲಿವೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ ಇಟಗಿ ಗ್ರಾಮದ ಅಭಿವೃದ್ಧಿಗೆ ಸರಕಾರದ ವತಿಯಿಂದ ಹಾಗೂ ನನ್ನ ಕಡೆಯಿಂದ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ ಮಾತನಾಡಿ ತಾಲೂಕಿನಲ್ಲಿಯೇ ಹಲವು ವಿಶೇಷತೆಯನ್ನು ಹೊಂದಿದ ಇಟಗಿ ಗ್ರಾಮ ಪಂಚಾಯತಿಯು ಸುಸಜ್ಜಿತ ಕಟ್ಟಡ ನಿರ್ಮಿಸಲು ಸಹಕಾರ ನೀಡಿದ ಎಲ್ಲರ ಸೇವೆಯನ್ನು ಸ್ಮರಿಸುವುದಾಗಿ ಹೇಳಿದರು. ಮುಂಬರುವ ದಿನಗಳಲ್ಲಿ ಎಲ್ಲರು ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವ ಅಗತ್ಯವಿದ್ದು ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಮಾತನಾಡಿದರು. ಗಣ್ಯರು, ಗ್ರಾಪಂ ಸದಸ್ಯರು ಮತ್ತು ಸಿಬ್ಬಂದಿಯನ್ನು ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಿತ್ತೂರಿನ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಜಿ, ಇಟಗಿ-ನಂದಗಡ ವೀರಕ್ತ ಮಠದ ಚನ್ನವೀರ ದೇವರು, ಬಿಳಕಿ-ಅವರೊಳ್ಳಿಯ ಚನ್ನಬಸವದೇವರು, ಗ್ರಾಪಂ ಉಪಾಧ್ಯಕ್ಷೆ ರಾಜಶ್ರೀ ಹುಣಶೀಕಟ್ಟಿ, ಅಧಿಕಾರಿಗಳಾದ ರಮೇಶ ಮೇತ್ರಿ, ವಿಜಯಕುಮಾರ ಕೋತಿನ, ರೂಪಾಲಿ ಬಡಕುಂದ್ರಿ, ಇಟಗಿ ಗ್ರಾಪಂ ಪಿಡಿಓ ವಿರೇಶ ಸಜ್ಜನ ಹಾಗೂ ಇತರರು ಇದ್ದರು. ಚನ್ನಮ್ಮ ರಾಣಿ ಸ್ಮಾರಕ ಪ್ರೌಢ ಶಾಲೆಯ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರು. ವಿವೇಕ ಕುರಗುಂದ ಹಾಗೂ ಈರಣ್ಣ ಕಾದ್ರೋಳ್ಳಿ ನಿರೂಪಿಸಿದರು.
.