
ಚನ್ನಮ್ಮನ ಕಿತ್ತೂರು,ಮೇ 30: ನಮ್ಮ ಸರ್ಕಾರದಲ್ಲಿ ಅನುದಾನಕ್ಕೆ ಏನೂ ಕೊರತೆಯಿಲ್ಲ. ಅಲ್ಪ-ಸ್ವಲ್ಪ ಗ್ರಾಮದ ಯೋಜನೆಗಳಿಗೆ ಅನುದಾನ ಕೊರತೆಯಾಗಬಹುದು ಆದರೆ ಶಾಲಾ ಶೈಕ್ಷಣಿಕ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಯಾವುದೇ ರೀತಿಯಿಂದ ಕಡಿಮೆ ಮಾಡುವುದಿಲ್ಲ. ಅದಲ್ಲದೇ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾನು ಸಿದ್ದನಿದ್ದೇನೆ. ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ತಾಲೂಕಿನ ಅವರಾದಿ ಗ್ರಾಮದ ನೂತನ ಪ್ರೌಢಶಾಲೆ ಲೋಕಾರ್ಪಣೆಗೊಳಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಲವು ವರ್ಷಗಳಿಂದ ಅವರಾದಿ ಪ್ರೌಢಶಾಲೆ ಸ್ಥಾಪನೆಗೆ ಮಾಡಿದ ಪ್ರಯತ್ನದ ಫಲ ಇಂದು ನಮಗೆ ದೊರೆತಿದ್ದು ಇದರ ಸದುಪಯೋಗ ಗ್ರಾಮದ ಮಕ್ಕಳು ಪಡೆದುಕೊಂಡು ನಿಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ರಾಜಕೀಯ ಹಸ್ತಕ್ಷೇಪ ಮಾಡದೇ ಈ ಶಾಲೆಗೆ ಒಳ್ಳೆಯ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳ ಭವಿಷ್ಯ ಉಜ್ವಲವಾಗಲೇಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೆಎಂಎಫ್ ನಿರ್ದೇಶಕ ಬಸವರಾಜ ಪರವಣ್ಣನವರ 2005 ರಿಂದ ಈ ಗ್ರಾಮಕ್ಕೆ ಪ್ರೌಢಶಾಲೆ ತರಲು ಪ್ರಯತ್ನಿಸಿದ್ದೇವೆ. ಇಂದು ಆ ಫಲ ಶಾಸಕ ಬಾಬಾಸಾಹೇಬ ಪಾಟೀಲ ಅವರ ಸತತ ಪ್ರಯತ್ನದಿಂದ ದೊರೆತಿದೆ. ಮಕ್ಕಳಿಗೆ ಶಿಕ್ಷಣ ಪಡೆಯಲು ಅನುಕೂಲವಾಯಿತು ಎಂದರು.
ಡಿಡಿಪಿಐ ಲೀಲಾವತಿ ಹಿರೇಮಠ ಮಾತನಾಡಿ 7 ವರ್ಷಗಳ ಹಿಂದೆ ನಾನು ಅವರಾದಿಯಲ್ಲಿ ಪ್ರೌಢಶಾಲೆ ಅಗತ್ಯತೆಯನ್ನು ವಿವರವಾಗಿ ದಾಖಲಿಸಿದ್ದೇ ಅದಕ್ಕಾಗಿ ಈ ಕಾರ್ಯಕ್ರಮದಲ್ಲಿ ಖುಷಿಹಂಚಿಕೊಳ್ಳಲು ಬಂದಿದ್ದೇನೆ. ಈ ಸಲದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕಿತ್ತೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಶಾಸಕ ಬಾಬಾಸಾಹೇಬ ಮತ್ತು ಬಿಇಓ ತುಬಾಕಿ ಇವರ ಸತತ ಶ್ರಮ ಕಾರಣವಾಗಿದ್ದು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ನೂರಕ್ಕೆ ನೂರರಷ್ಟು ದಾಖಲೆಯಾಗಲಿದೆ ಎಂದರು.
ರಾಜಗುರು ಸಂಸ್ಥಾನ ಕಲ್ಮಠ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಜೀ, ನಿಚ್ಚಣಕಿ ಶ್ರೀ ಪಂಚಾಕ್ಷರಿ ಸ್ವಾಮಿಜೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು. ನಿರ್ಮಲಾ ಕಲ್ಲಿ ಪ್ರಾರ್ಥನಾಗೀತೆ ಹಾಡಿದರು. ರೇಣುಕಾ ಕರವೀರನವರ ಸಂಗಡಿಗರಿಂದ ಸ್ವಾಗತ ಗೀತೆ, ಪ್ರಧಾನಗುರು ಎನ್.ಆರ್ ದಿನ್ನಿಮನಿ ಸ್ವಾಗತಿಸಿ ನಿರೂಪಿಸಿದರು, ತಹಶೀಲ್ದಾರ ರವೀಂದ್ರ ಹಾದಿಮನಿ, ತಾಪಂ ಇಓ ಮಹೇಶ ಹೂಲಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಬಿಇಓ ಸಿ.ವೈ.ತುಬಾಕಿ, ಸಿಪಿಐ ಶಿವಾನಂದ ಗುಡಗನಟ್ಟಿ, ಎಸ್‍ಡಿಎಂಸಿ. ಅಧ್ಯಕ್ಷ ಬಸವರಾಜ ಪರವಣ್ಣನವರ, ಪಿಡಿಓ ಶಿವಲಿಂಗಯ್ಯ ಗುರುವೈನವರ, ಗ್ರಾಪಂ ಅಧ್ಯಕ್ಷತೆ ಮಹಾದೇವಿ ಪಾಟೀಲ, ಎಸ್.ಎಚ್.ಪಾಟೀಲ, ಅಶೋಕ ಅಳ್ನಾವರ, ಉಮೇಶ ಹುಂಬಿ, ಚಿದಾನಂದ ಪರವಣ್ಣವರ, ಗ್ರಾಪಂ ಸಿಬ್ಬಂದಿ, ಸರ್ವಸದಸ್ಯರು, ಗ್ರಾಮದ ಹಿರಿಯರು, ಶಾಲಾ ಎಲ್ಲ ಶಿಕ್ಷಕರು, ಮಕ್ಕಳು ಇನ್ನಿತರರಿದ್ದರು.