
ಬೆಂಗಳೂರು, ಸೆ. ೩- ಮಹಾಲಕ್ಷ್ಮೀಪುರಂನ ಕೆಎಂಡಬ್ಲ್ಯೂಎ ವಿದ್ಯಾನಿಕೇತನದಲ್ಲಿ ನೂತನವಾಗಿ ಸ್ಥಾಪಿಸಿರುವ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವನ್ನು ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಹಾಗೂ ಮಾಜಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಗಳನ್ನುದ್ದೇಶಿಸಿ ಮಾತನಾಡಿದ ಡಾ. ಅಶ್ವತ್ಥನಾರಾಯಣ ಅವರು, ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನ ಸಂಪನ್ಮೂಲಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕೆಎಂಡಬ್ಲ್ಯೂಎ ವಿದ್ಯಾನಿಕೇತನವು ತನ್ನ ಶೈಕ್ಷಣಿಕ ಪ್ರಗತಿಗೆ ದೀಕ್ಷಾ -ವೇದಾಂತು ಸಂಸ್ಥೆಯನ್ನು ಶೈಕ್ಷಣಿಕ ಪಾಲುದಾರ ಹಾಗೂ ಮಾರ್ಗದರ್ಶಕ ಶಕ್ತಿಯಾಗಿ ಪರಿಗಣಿಸಿದೆ. ದೀಕ್ಷಾ- ವೇದಾಂತು ಮುಖ್ಯಸ್ಥ ಡಾ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಬೋರ್ಡ್ ಪರೀಕ್ಷೆಯಲ್ಲಿ ದ್ವಿತೀಯ ರ್‍ಯಾಂಕ್ ಸೇರಿದಂತೆ ಗಮನಾರ್ಹ ಫಲಿತಾಂಶಗಳನ್ನು ದಾಖಲಿಸಿದೆ ಎಂದು ಸಂಸ್ಥೆ ತಿಳಿಸಿದೆ.
ನೂತನ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ ಹಾಗೂ ಗ್ರಂಥಾಲಯವು ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಮತ್ತಷ್ಟು ವೃದ್ಧಿಸುವುದರ ಜತೆಗೆ, ಪ್ರಾಯೋಗಿಕ ಜ್ಞಾನ ಮತ್ತು ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗಲಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಎಂಡಬ್ಲ್ಯೂಎ ವಿದ್ಯಾನಿಕೇತನದ ಗೌರವ ಅಧ್ಯಕ್ಷರಾದ ಮನೋಜ್ ಕುಮಾರ್, ಅಧ್ಯಕ್ಷ ಸುನಿಲ್ ಎಸ್., ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬಿ, ಖಜಾಂಚಿ ಗಣೇಶ್ ರಾವ್ ಕೇಸರ್ಕರ್, ವ್ಯವಸ್ಥಾಪಕ ಕಾರ್ಯದರ್ಶಿ ಸುರೇಶ್ ರಾವ್, ಮೇಘಲ ವೀರೇಶ್, ಕೃಷ್ಣ, ವೀಣಾ ಮೋಹನ್ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
































