Home ಜಿಲ್ಲೆ ಬೆಂಗಳೂರು ಕೇರ್‌ಪ್ರೀನಿಯರ್ ಕೇಂದ್ರ ಶಾಸಕ ಎಸ್‌ಆರ್‌ವಿ ಉದ್ಘಾಟನೆ

ಕೇರ್‌ಪ್ರೀನಿಯರ್ ಕೇಂದ್ರ ಶಾಸಕ ಎಸ್‌ಆರ್‌ವಿ ಉದ್ಘಾಟನೆ

ಬೆಂಗಳೂರು.ಮೇ೧೫: ಭಾರತದ ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ತಾಯಂದಿರು ಎದುರಿಸುತ್ತಿರುವ ಮಕ್ಕಳ ಆರೈಕೆಯ ಸಮಸ್ಯೆಗೆ ಪರಿಹಾರ ನೀಡಲು ಮತ್ತು ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಲ್ಪಿಸಲು ಮೊಬೈಲ್ ಕ್ರೆಷೆಸ್ ಸಂಸ್ಥೆಯು ವಿನೂತನ ಹೆಜ್ಜೆ ಇರಿಸಿದೆ. ಇ ನಿಟ್ಟಿನಲ್ಲಿ ಕೇರ್‌ಪ್ರೀನಿಯರ್ ಎಂಬ ಹೊಸ ಮಾದರಿಯನ್ನು ಲೋಕಾರ್ಪಣೆ ಮಾಡಿದ್ದು, ಆರಂಭಿಕ ಹೆಜ್ಜೆಯಾಗಿ ಬೆಂಗಳೂರಿನ ಯಲಹಂಕದ ಕೋಟೆ ಬೀದಿಯಲ್ಲಿ ನೂತನ ಆಲೋಕ ಕ್ರೆಷೆ ಕೇಂದ್ರವನ್ನು ಆರಂಭಿಸಿದೆ. ಈ ವಿಶಿಷ್ಟ ಕೇಂದ್ರವನ್ನು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಲಹಂಕ ಶಾಸಕರಾದ ಶ್ರೀ ಎಸ್.ಆರ್. ವಿಶ್ವನಾಥ್ ಅವರು, “ಮೂರು ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬೆಂಗಳೂರಿನ ಮೊದಲ ಕೇರ್‌ಪ್ರೀನಿಯರ್ ಶಿಶುಪಾಲನಾ ಕೇಂದ್ರ ಇದಾಗಿದೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಎಂಟು ಗಂಟೆಗಳ ಕಾಲ ತಮ್ಮ ಮಕ್ಕಳನ್ನು ಸುರಕ್ಷಿತವಾಗಿರಿಸಲು ಈ ಕೇಂದ್ರ ನೆರವಾಗಲಿದೆ. ಮಕ್ಕಳಿಗೆ ಉತ್ತಮ ಆರಂಭಿಕ ಶಿಕ್ಷಣ ಮತ್ತು ಪೋಷಣೆ ಸಿಗುವುದರಿಂದ ತಾಯಂದಿರು ನಿಶ್ಚಿಂತೆಯಿಂದ ಕೆಲಸಕ್ಕೆ ಹೋಗಬಹುದು,” ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕೇಂದ್ರದ ಜವಾಬ್ದಾರಿಯನ್ನು ಈಶ್ವರಿ ಕಲ್ಪ ಮಹಿಳಾ ಸ್ವಸಹಾಯ ಸಂಘದ ಸದಸ್ಯರಾದ ಚೈತ್ರಾ ಬಿ.ಎಸ್. ಅವರು ವಹಿಸಿಕೊಂಡಿದ್ದಾರೆ. ಇವರಿಗೆ ಮೊಬೈಲ್ ಕ್ರೆಷೆಸ್ ಸಂಸ್ಥೆಯು ಬಾಲ್ಯದ ಆರಂಭಿಕ ಹಂತದ ಬೆಳವಣಿಗೆ ಕುರಿತು ವಿಶೇಷ ತರಬೇತಿ ನೀಡಿದೆ. ಚೈತ್ರಾ ಅವರು ಈ ಕೇಂದ್ರವನ್ನು ತಮ್ಮದೇ ಆದ ಸ್ವತಂತ್ರ ಉದ್ಯಮವಾಗಿ ನಡೆಸುತ್ತಿದ್ದು, ಪ್ರತಿ ತಿಂಗಳು ಸುಮಾರು ?೨೩,೦೦೦ ಆದಾಯ ಗಳಿಸುತ್ತಿದ್ದಾರೆ. ಇದು ನಿಗದಿಪಡಿಸಿದ ಕನಿಷ್ಠ ವೇತನಕ್ಕಿಂತ ಗಮನಾರ್ಹವಾದ ವೇತನವಾಗಿದೆ.
ಈ ಕುರಿತು ಮೊಬೈಲ್ ಕ್ರೆಷೆಸ್ ನ ನೀತಿ ಮತ್ತು ಪಾಲುದಾರಿಕೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕಿ ಚಿರಶ್ರೀ ಘೋಷ್ ಅವರು, “ನಾವು ಎಲ್ಲವನ್ನೂ ಸರ್ಕಾರವೇ ಭರಿಸಲಿ ಎಂದು ಕೇಳುತ್ತಿಲ್ಲ, ಅಥವಾ ದಾನಿಗಳ ನೆರವಿನಿಂದಲೇ ಶಾಶ್ವತವಾಗಿ ನಡೆಸಲು ಬಯಸುತ್ತಿಲ್ಲ” ಎಂದು ತಿಳಿಸಿದ್ದಾರೆ.

ನಗರ ಪ್ರದೇಶದ ಶ್ರಮಿಕ ವರ್ಗದ ಮಹಿಳೆಯರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಮತ್ತು ಅವರ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಕಲ್ಪಿಸಲು ಈ ಆಲೋಕ ಕೇಂದ್ರವು ಒಂದು ಆಶಾಕಿರಣವಾಗಿದೆ.