ಸಿದ್ಧಲಿಂಗಶ್ರೀ ಪ್ರಶಸ್ತಿಗೆ ಡಾ.ಸುಜಾತಾ ಚಲವಾದಿ ಆಯ್ಕೆ

ತಾಳಿಕೋಟೆ:ನ.೧೮: ವಿಜಯಪುರ ನಗರದಲ್ಲಿ ಕನ್ನಡ ಪುಸ್ತಕ ಪರಿಷತ್ತು ವತಿಯಿಂದ ಇದೇ ದಿ. ೧೯ ರಂದು ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದಲ್ಲಿ ಕೊಡಮಾಡಲಾಗುವ ಡಾ.ತೋಂಟದ ಸಿದ್ಧಲಿಂಗಶ್ರೀ ಪುಸ್ತಕ ಪ್ರಶಸ್ತಿಗೆ ತಾಳಿಕೋಟೆಯ ಎಸ್.ಕೆ.ಮಹಾ ವಿದ್ಯಾಲಯದ ಉಪನ್ಯಾಸಕರಾದ ಶ್ರೀಮತಿ ಡಾ.ಸುಜಾತಾ ಚಲವಾದಿ ಅವರು ಆಯ್ಕೆಯಾಗಿದ್ದಾರೆ.
ವಿಜಯಪುರದ ರಾಜಾಜಿನಗರದ ಪ್ರಗತಿ ಸ್ಕೂಲ್‌ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ತಾಳಿಕೋಟೆಯ ಎಸ್.ಕೆ.ಮಹಾ ವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ಡಾ.ಸುಜಾತಾ ಚಲವಾದಿ ಅವರ ಲಚಮವ್ವ ಕಥಾ ಸಂಕಲನ ಕೃತಿಯು ಪ್ರಶಸ್ತಿಗೆ ಭಾಜನವಾಗಿದ್ದು ಹತ್ತು ಸಾವಿರ ನಗದು, ಪ್ರಶಸ್ತಿ ಪತ್ರ ನೀಡಿ ಸತ್ಕರಿಲಾಗುವುದೆಂದು ಕನ್ನಡ ಪುಸ್ತಕ ಪರಿಷತ್ತು ಅಧ್ಯಕ್ಷರಾದ ಪ.ಗು.ಸಿದ್ದಾಪುರ ಮತ್ತು ಪ್ರಧಾನ ಕಾರ್ಯದರ್ಶಿ ಶಂಕರ ಬೈಚಬಾಳ ತಿಳಿಸಿದ್ದಾರೆ.
ವಿಜಯಪುರದ ಹಿರಿಯ ಸಾಹಿತಿ ಸಿದ್ಧಲಿಂಗ ಮನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಮ್ಮೇಳನದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಪ್ರಕಾಶ ಖಾಡೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಹಿರಿಯ ಸಾಹಿತಿಗಳಾದ ಡಾ.ಎಚ್.ಟಿ.ಪೋತೆ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಕುಶಾಲ ಬರಗೂರ, ಡಾ.ಶ್ರೀಶೈಲ ನಾಗರಾಳ, ಡಾ.ಸಂಗಮೇಶ ಮೇತ್ರಿ, ನಾಡೋಜ ಡಾ.ಮನು ಬಳಿಗಾರ, ಕಸಾಪ ಜಿಲ್ಲಾ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಡಿ.ವೈ.ಎಸ್.ಪಿ.ಬಸವರಾಜ ಯಲಿಗಾರ ಮೊದಲಾದವರು ಪಾಲ್ಗೊಳ್ಳಲಿದ್ದಾರೆಂದು ಅವರು ತಿಳಿಸಿದ್ದಾರೆ.