
ಬೀದರ್:ಮೇ.24: ಪ್ರಜಾಪ್ರಭುತ್ವದ ಬೀಜ ವಚನಗಳಲ್ಲೇ ಇದೆ ಎಂದು ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾ ಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ಬಸವೋತ್ಸವದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳು, ಬದುಕನ್ನು ಉನ್ನತಿಗೇರಿಸುವ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದರು.
ಶರಣರ ನಾಡಿನಲ್ಲಿರುವ ನಾವು ವಚನಗಳ ಶೇಷ್ಠತೆಯ ಅರಿವಿಲ್ಲದೆ, ನಿಧಿ ಮೇಲೆ ಕುಳಿತು ತುತ್ತು ಅನ್ನಕ್ಕೆ ಕೈಚಾಚುವವರಂತಾಗಿದ್ದೇವೆ ಎಂದು ಹೇಳಿದರು
ಅಂದು ಶರಣರು ಅಡುಗೆ ಮಾಡಿ ಇಟ್ಟಿದ್ದಾರೆ. ಈಗ ಅದನ್ನು ಬಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಅವರು ಬಸವ ತತ್ವ ಪ್ರಚಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಪ್ರವಚನವೇ ಅವರಿಗೆ ತಪಸ್ಸು ಆಗಿತ್ತು ಎಂದು ಸ್ಮರಿಸಿದರು.
ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಸೈಕಲ್ ತುಳಿದು ಬಸವ ತತ್ವ ಪ್ರಚಾರಗೈದಿದ್ದರು. ಮಠ ಕಟ್ಟಿದ್ದರು. ಬಸವ ತತ್ವದ ಪುನರುತ್ಥಾನಗೈದವರೆನಿಸಿದ್ದರು ಎಂದು ಹೇಳಿದರು.
ಅಕ್ಕ ಸತ್ಯದ ದಾರಿಯಲ್ಲಿ ಹಿಡಿದದ್ದನ್ನು ಬಿಡದ ಛಲವಾದಿಯಾಗಿದ್ದರು. ತಪ್ಪಿದವರನ್ನು ತಿದ್ದುವ ಗುಣ ಅವರಲ್ಲಿತ್ತು. ಅಕ್ಕನವರಂತೆ ಆಗಲು ಪ್ರಯತ್ನಿಸೋಣ ಎಂದರು.
ಮುಖಂಡ ನಾಗರಾಜ ಕರ್ಪೂರ ಮಾತನಾಡಿ, ಯುವಕರಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಮಾತುಗಳೇ ಪ್ರೇರಣೆ ಎಂದು ಹೇಳಿದರು.
ನಂಜನಗೂಡಿನ ಎಚ್.ಎಂ. ಮಂಜುಳಾ ಮಧು ಮಾತನಾಡಿ, ಬಸವ ನಾಡಿನವರು ಹೃದಯಲ್ಲಿ ಪ್ರೀತಿಯನ್ನೇ ತುಂಬಿಕೊಂಡಿದ್ದಾರೆ ಎಂದು ತಿಳಿಸಿದರು.
ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಬಸವ ತತ್ವ ಎಲ್ಲ ಜಾತಿ, ವರ್ಗ, ವರ್ಣದವರಿಗೆ ಬೇಕು. ಬಸವಣ್ಣನವರ ಅನುಯಾಯಿಗಳಾದವರು ಅಸ್ಪøಶ್ಯರನ್ನೂ ಅಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅವರು ದೂರ ಸರಿಯುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಮಾತನಾಡಿ, ಪ್ರತಿಯೊಬ್ಬರಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಅಕ್ಕ ಅನ್ನಪೂರ್ಣತಾಯಿ ಅವರಲ್ಲಿತ್ತು. ಕಲಬುರಗಿ ಮಹಾನಗರದಲ್ಲಿ ಬಸವ ಸೇವಾ ಪ್ರತಿಷ್ಠಾನ ಕಟ್ಟಿ ಬೆಳೆಸಿದ ಅವರು ನಮಗೆಲ್ಲ ಬಸವ ತತ್ವ ಕಲಿಸಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಉದ್ಯಮಿ ವೀರಶೆಟ್ಟಿ ಪಟ್ನೆ, ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ, ಸಾಹಿತಿ ರಮೇಶ ಮಠಪತಿ ಮತ್ತಿತರರು ಇದ್ದರು.
ಡಾ. ಪ್ರಿಯಾ ಎಲಿ, ಪೂರ್ಣಚಂದ್ರ ಮೈನಾಳೆ ವಚನ ನೃತ್ಯ ಪ್ರದರ್ಶಿಸಿದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ಚಂದ್ರಶೇಖರ ಹೆಬ್ಬಾಳೆ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು.
ನೀಲಮ್ಮನ ಬಳಗದ ಗುರುಶ್ರೀ ಮಠಪತಿ ನಿರೂಪಿಸಿದರು. ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ಸ್ವಾಗತಿಸಿದರು.


























