ಸಿರಾ, ಸೆ. ೨೦- ಜಾತಿ ರಾಜಕಾರಣವೋ.. ಅಥವಾ ರಾಜಕೀಯ ವೈಷಮ್ಯವೋ.. ಗೊತ್ತಿಲ್ಲ. ಒಟ್ಟಾರೆ ಜಾತ್ಯಾತೀತ ಮತ್ತು ಸಹಕಾರಿ ತತ್ವದಡಿಯಲ್ಲಿ ನಡೆದ ಕೆಲವೊಂದು ಘಟನೆಗಳು ತಾಲ್ಲೂಕು ಆಡಳಿತದಲ್ಲಿ ಜಾತಿ-ಜಾತಿಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಾಂದರ್ಭಿಕ ಸಂಘರ್ಷಗಳು ರಾಜಕಾರಣದ ಬೇಗುದಿಯಲ್ಲಿ ಬುಸುಗುಡುವಂತಹ ವಾತಾವರಣವನ್ನು ಸೃಷ್ಟಿಸಿದೆ.
ಜಾತ್ಯಾತೀತವಾಗಿ ನಡೆಯಬೇಕಾದ ಸಹಕಾರಿ, ಸಾರ್ವಜನಿಕ ಚುನಾವಣೆಗಳು, ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆಗಳಲ್ಲಿ ಇಂದು ರಾಜಕೀಯ ಪಕ್ಷಗಳ ಜಾತಿ ರಾಜಕಾರಣದಿಂದಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂಬುದಕ್ಕೆ ತಾಲ್ಲೂಕಿನಲ್ಲಿ ನಡೆದ ಹಲವಾರು ಘಟನೆಗಳು ನಡೆದು ಹೋಗಿರುವುದಕ್ಕೆ ಸಾಕ್ಷಿಯಾಗಿದೆ. ಆದರೆ ಸಹಕಾರಿ ತತ್ವ ಮತ್ತು ಜಾತ್ಯಾತೀತ ವ್ಯಕ್ತಿತ್ವದ ಹಾದಿಯಲ್ಲಿ ಸಾಗುತ್ತಿರುವ ಬಹುತೇಕ ಮಂದಿ ಅದೇ ಸಹಕಾರ ಕ್ಷೇತ್ರ ಮತ್ತು ಜಾತ್ಯಾತೀತ ತತ್ವಕ್ಕೆ ಮಸಿ ಬಳಿದಿದ್ದು ಮಾತ್ರ ಪ್ರತಿಯೊಬ್ಬರನ್ನು ಪ್ರಶ್ನೆ ಮಾಡುವಂತಾಗಿದೆ.
ರಾಜಕಾರಣದಲ್ಲಿನ ಜೋಡೆತ್ತು-ಕಳ್ಳೆತ್ತುಗಳು, ಸಹಕಾರ ಕ್ಷೇತ್ರದಲ್ಲಿ ಜನ ಸಾಮಾನ್ಯರಿಗೆ ಸಿಗದಂತಹ ವೈಟ್ ಕಾಲರ್ ರಾಜಕಾರಣಿಗಳ ಬೂಟಾಟಿಕೆ ರಾಜಕಾರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜಾತ್ಯಾತೀತ ಹೆಸರಿನಲ್ಲಿ ತಮ್ಮ ತಮ್ಮ ಜಾತಿಯವರಿಗೆ ಸಹಕಾರ, ಹೀಗೆ ಹತ್ತು ಹಲವಾರು ಆರೋಪಗಳನ್ನು ಮಾಡುತ್ತಾ ತಮ್ಮ ತಮ್ಮ ವೈಯುಕ್ತಿಕ ಹಿತಾಸಕ್ತಿಗಾಗಿ, ತಮ್ಮ ತಮ್ಮ ಇಮೇಜನ್ನೇ ಡ್ಯಾಮೇಜು ಮಾಡಿಕೊಂಡಂತಹ ಸಾಕಷ್ಟು ಪ್ರಸಂಗಗಳು ರಾಜಕೀಯ ನಾಯಕರುಗಳ ನಡುವೆ ಪೈಪೋಟಿಯಲ್ಲಿ ನಡೆದು ಹೋದವು.
ಇದಕ್ಕೆ ಉದಾಹರಣೆ ಎಂದರೆ ಕೆಲವು ದಿನಗಳ ಹಿಂದೆ ನಡೆದ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಮತ್ತು ಅದೇ ರೀತಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರ ಆಡಳಿತ ಮಂಡಳಿಗೆ ನಡೆದ ಚುನಾವಣೆ. ಇಲ್ಲಿ ಮಾಜಿ ಸಚಿವರು, ಅಹಿಂದ ವರ್ಗದ ನಾಯಕರು, ಸಹಕಾರ ರತ್ನ ಪ್ರಶಸ್ತಿ ಪಡೆದಂತಹ ಶಾಸಕರನ್ನ ಒಪ್ಪಿ,ಅಪ್ಪಿಕೊಂಡಿದ್ದು ಸಹ ಆಯಿತು. ಆದರೂ ಸಹ ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ ಕೆಲವೊಂದು ರಾಜಕೀಯವಾದ ನಾಟಕೀಯ ಪ್ರಸಂಗಗಳು, ಜಾತಿ ರಾಜಕಾರಣದ ಮುಸುಕಿನ ಗುದ್ದಾಟಗಳು ನಡೆಯುತ್ತಲೇ ಇವೆ.
ಇಲ್ಲಿ ಚುನಾವಣೆಯಲ್ಲಿ ಸಿರಾದಿಂದ ಸ್ಪರ್ಧಿಸಿದ್ದವರು, ಗೆದ್ದವರು, ಸೋತವರು ಎಲ್ಲರೂ ಅವರೆ. ಆದರೆ ಚುನಾವಣೆಯಲ್ಲಿ ಕುತಂತ್ರಗಾರಿಕೆ, ವಾಮಮಾರ್ಗ, ಹಿಟ್ಲರ್ ಆಡಳಿತ, ಭ್ರಷ್ಟಾಚಾರ, ಮೋಸ ಹೀಗೆ ಹಲವಾರು ಪದಪುಂಜಗಳ ಪ್ರಯೋಗಕ್ಕೆ ಗುರಿಯಾದವರು ಯಾರು.? ಎಂಬುದು ಮೇಲ್ನೋಟಕ್ಕೆ ಪ್ರಶ್ನಾತೀತವಾಗಿ ಉಳಿದಿದೆ. ಒಟ್ಟಾರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ದವಾಗಿ ಚುನಾವಣೆ ನಡೆಯಿತಾ.? ಈ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಉತ್ತರ ನೀಡಬೇಕಾದವರು ಅವರೇ. ಆದರೆ ಈ ಮುಸುಕಿನ ಗುದ್ದಾಟದಲ್ಲಿ ಕೆ.ಎನ್.ಆರ್. ರವರನ್ನು ಎಳೆದು ತಂದಿದ್ದು ಏಕೆ.? ಎಂಬುದನ್ನು ಅವರ ಅಭಿಮಾನಿಗಳೇ ಪ್ರಶ್ನೆ ಮಾಡಬೇಕು.
ಇನ್ನು ಸಿರಾ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿವಾದ : ದಶಕಗಳಿಂದ ಸಿರಾ ಖಾಸಗಿ ಬಸ್ ನಿಲ್ದಾಣ ಅಭಿವೃದ್ದಿಯ ನೆಪದಲ್ಲಿಯೇ ಕಾಲ ಕಳೆಯುತ್ತಾ ಬಂದಿದ್ದು, ಗುಂಡಿ ಮುಚ್ಚಲು, ಡಾಂಬರ್ ಹೀಗೆ ಹಲವಾರು ರೀತಿಯ ರೀತಿಯಲ್ಲಿ ಸರ್ಕಾರದ ಅನುದಾನವನ್ನ ದುರುಪಯೋಗ ಪಡಿಸಿಕೊಳ್ಳುತ್ತಲೇ ಸಾಗುತ್ತಾ, ಇತಿಹಾಸದ ಗರ್ಭದಲ್ಲಿ ಅಡಗಿ ಹೋಗಿದೆ. ಆದರೆ ಬಸ್ ನಿಲ್ದಾಣದ ರಸ್ತೆಯಲ್ಲಿ ಇದ್ದ ಗುಂಡಿಗಳಲ್ಲಿ ಕಾಲಿಟ್ಟು ಬಿದ್ದು, ನೋವನ್ನು ಅನುಭವಿಸಿದವರ ಸಂಖ್ಯೆಯು ಅಷ್ಟೇ ಇದೆ. ಆದರೆ ಇದು ಏನೇ ಇರಲಿ ಈಗ ಕೋಟಿ-ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ನವೀಕರಣಗೊಂಡಿದ್ದು. ಮರು ಹುಟ್ಟು ಪಡೆದುಕೊಂಡಿದೆ. ಆದರೆ ನಾಮಕರಣ ಭಾಗ್ಯ ಮಾತ್ರ ಹಲವಾರು ಹೋರಾಟಗಳನ್ನು ಹುಟ್ಟು ಹಾಕಿದೆ.
ಸಿರಾ ಕೋಟೆ ನಾಡು. ಇಲ್ಲಿಗೆ ಕಸ್ತೂರಿ ರಂಗಪ್ಪನಾಯಕನ ಹೆಸರು ಇಡಬೇಕು ಎಂಬುದು ಒಂದು ವರ್ಗದ ಹೋರಾಟವಾದರೆ, ಇನ್ನು ಕೆಲವರು ಹಾಲಿ ಶಾಸಕರು, ಹೇಮಾವತಿ ಹರಿಕಾರರು ಆದ ಹಾಲಿ ಶಾಸಕ , ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ ಜ಼ಯಚಂದ್ರ ಹೆಸರು ಇಡಬೇಕೆಂದು ಪ್ರಬಲ ಪೈಪೋಟಿ ನೆಡೆಯುತ್ತಿದೆ. ಇದರ ಜೊತೆಗೆ ಹನುಮಾನ್ ಬಸ್ ಮಾಲೀಕರು ಆದ ದಿ. ಮಾಜಿ ಶಾಸಕ ಪಿ.ಎಂ ರಂಗನಾಥಪ್ಪ ಮತ್ತು ದಿವಂಗತ ಬಿ.ಸತ್ಯನಾರಾಯಣ ಹೆಸರನ್ನು ಇಡಬೇಕೆಂದು ರಾಜಕೀಯ ಪಕ್ಷಗಳ ನಾಯಕರು ಮುಂದಾಗಿದ್ದಾರೆ. ಇದರ ಜೊತೆಗೆ ಸಿರಾ ಸೀಮೆ ಜುಂಜಪ್ಪನ ನೆಲವೀಡು, ಜಾನಪದ ಸೊಗಡಿನ ತವರೂರು ಎಂದು ಒಂದು ಸಮುದಾಯ ಮನವಿ ಸಲ್ಲಿಸಿದ್ದಾರೆ. ಇಷ್ಟಕ್ಕೆ ಸಾಲದೆಂಬಂತೆ ತಾಲ್ಲೂಕಿನ ಹೆಮ್ಮೆಯ ಪುತ್ರ, ಬಂಡಾಯ ಸಾಹಿತಿಗಳು ಆದಂತಹ ನಾಡೋಜ ಬರಗೂರು ರಾಮಚಂದ್ರಪ್ಪನವರ ಹೆಸರಿಡಬೇಕೆಂದು ಇಡೀ ಸಾಹಿತ್ಯಾಸಕ್ತ ಪ್ರೇಮಿಗಳ ಒಕ್ಕೊರಲಾಗಿದೆ.
ಹೀಗಿರುವಾಗ ಹಾಲಿ ಶಾಸಕರಿಗೆ ಬಸ್ ನಿಲ್ದಾಣಕ್ಕೆ ಹೆಸರಿಡುವುದೇ ಒಂದು ಸವಾಲಾಗಿ ಪರಿಣಮಿಸಿದೆ. ಒಂದು ವರ್ಗವನ್ನು ಸಂತೈಸಲು ಹೋದರೆ ಮತ್ತೊಂದು ವರ್ಗ ಮುನಿಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಜಾತ್ಯಾತೀತ ನಾಡಿನಲ್ಲಿ ಜಾತಿ-ಜಾತಿಗಳ ನಡುವಿನ ಮುನಿಸು ಮೇಳೈಸುವಂತಾಗಿದ್ದು, ಕೊನೆಯಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರ ಓಲೈಕೆಯಲ್ಲಿರುವ ಹಾಲಿ ಶಾಸಕರು ಅಲ್ಪಸಂಖ್ಯಾತರ ಋಣ ತೀರಿಸಲೂ ಸಹ ಮುಂದಾಗಬಹುದೆಂಬ ಆಲೋಚನೆಗಳು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.




























