
ತಾಳಿಕೋಟೆ:ನ.21: ಇಂದಿನ ದಿನಮಾನಗಳಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಉದ್ಯೋಗದಾತರು ಕೌಶಲ್ಯನಿರತ ಉದ್ಯೋಗಿಗಳ ಹುಡುಕಾಟದಲ್ಲಿ ಇರುವುದರಿಂದ ಕೇವಲ ನಮ್ಮ ಪದವಿಯಿಂದಲ್ಲ ಜೀವನದಲ್ಲಿ ಕೌಶಲ್ಯ ವೃದ್ದಿಸಿಕೊಂಡು ಉದ್ಯೋಗಿಗಳಾಗುವತ್ತ ಗಮನ ಹರಿಸಬೇಕೆಂದು ಅಗಸ್ತ್ಯ ಫೌಂಡೇಶನ್‍ನ ವಿಜಯಪುರ ವಿಭಾಗದ ಕ್ಯಾಟಲೈಝರ್ ದಿನೇಶ್ ರಾಠೋಡ್ ಅವರು ಹೇಳಿದರು.
ಗುರುವಾರರಂದು ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಇಂಗ್ಲೀಷ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಕೋಶ ಹಾಗೂ ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ಇವುಗಳ ಸಹಯೋಗದಲ್ಲಿ ಏರ್ಪಡಿಸಲಾದ “ಸೃಜನಾತ್ಮಕ ಕೌಶಲ್ಯ ತರಬೇತಿ” ಕುರಿತು ಮೂರು ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ನಾವೆಲ್ಲರೂ ತಂತ್ರಜ್ಞಾನದ ಜೊತೆಗೆ ಸಾಗಬೇಕಾಗಿದೆ. ಕೃತಕ ಬುದ್ಧಿಮತ್ತೆ ಎಲ್ಲ ಕ್ಷೇತ್ರದಲ್ಲಿಯೂ ಪ್ರಭಾವ ಬೀರುತ್ತಿದ್ದು ಅದರೊಂದಿಗೆ ಹೊಂದಿಕೊಳ್ಳುವುದು ಅವಶ್ಯಕವಾಗಿದೆ ಪದವಿ ಮತ್ತು ಅಂಕಪಟ್ಟಿಗಳನ್ನು ಬದಿಗಿಟ್ಟು ಕೌಶಲ್ಯವನ್ನು ಅರಸುವ ದಿನಮಾನಗಳು ಹತ್ತಿರವಾಗಿದ್ದು ಬೇರೆ ಬೇರೆ ಕೌಶಲ್ಯಗಳಲ್ಲಿ ಪರಿಣಿತರಾಗಬೇಕು ಅದಕ್ಕಾಗಿ ನಿರಂತರ ಪ್ರಯತ್ನ ಮತ್ತು ಅಭ್ಯಾಸ ಅವಶ್ಯಕತೆ ಕೌಶಲ್ಯ ವೃದ್ದಿಗೊಂಡಷ್ಟು ದೇಶ ಅಭಿವೃದ್ದಿಯತ್ತ ದಾಪುಗಾಲು ಹಾಕಲಿದೆ ಎಂದರು.
ಇನ್ನೋರ್ವ ಎಸ್.ಕೆ.ಮಹಾ ವಿದ್ಯಾಲಯದ ಇಂಗ್ಲೀಷ ವಿಭಾಗ ಮುಖ್ಯಸ್ಥ ಡಾ. ಅನೀಲಕುಮಾರ ಆಲಾಳಮಠ ಅವರು ಮಾತನಾಡಿ ಪ್ರತಿಯೊಬ್ಬರ ಬಳಿಯೂ ವಿವಿಧ ಕೌಶಲ್ಯಗಳಿದ್ದು ಅವುಗಳನ್ನು ಹೊರಹಾಕುವ ಸಾಮಥ್ರ್ಯವನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು ಅಗಸ್ತ್ಯ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ಮೂರು ದಿನಗಳ ವಿಶೇಷ ತರಭೇತಿಯಲ್ಲಿ ಅತ್ಯುತ್ತಮವಾಗಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಡಿ.ಬಿ.ಮೂಗಡ್ಲಿಮಠ ಅವರು ಮಾತನಾಡಿ ಕೌಶಲ್ಯ ಇದ್ದರೆ ಉದ್ಯೋಗವೇ ನಿಮ್ಮನರಸಿ ಬರುತ್ತದೆ. ನಾವು ಎಲ್ಲರಿಗಿಂತಲೂ ವಿಶಿಷ್ಟವಾಗಿರಬೇಕು. ಆಗ ನಮ್ಮಲ್ಲಿರುವ ಜ್ಞಾನವನ್ನು ಚಿಮ್ಮಿಸಲು ಸಾಧ್ಯ. ಸತತ ಪ್ರಯತ್ನದಿಂದ ಹುಟ್ಟಿಕೊಳ್ಳುವ ಕೌಶಲ್ಯವು ಜೀವನವನ್ನು ಸುದಾರಿಸುತ್ತದೆ ಎಂದರು.
ಡಾ.ಅಜೇಯ ಅಬ್ಬಾರ ಸ್ವಾಗತಿಸಿದರು. ಪ್ರೊ. ರಮೇಶ ಜಾಧವ ಅತಿಥಿಗಳನ್ನು ಪರಿಚಯಿಸಿದರು. ಕು.ಕಲ್ಪನಾ ಕಟ್ಟಿಮನಿ ನಿರೂಪಿಸಿದರು, ಕುಮಾರಿ ಲಕ್ಷ್ಮೀ ವಡ್ಡರ ವಂದಿಸಿದರು.

























