Home ಜಿಲ್ಲೆ ರಾಯಚೂರಿನಲ್ಲಿ 371(ಜೆ) ಹೋರಾಟಗಾರರ ಮಹತ್ವದ ಸಭೆ ಮೇ 24ಕ್ಕೆ

ರಾಯಚೂರಿನಲ್ಲಿ 371(ಜೆ) ಹೋರಾಟಗಾರರ ಮಹತ್ವದ ಸಭೆ ಮೇ 24ಕ್ಕೆ

ಬೀದರ:ಮೇ.22:ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಉದ್ದೇಶದಿಂದ ಜಾರಿಗೆ ಬಂದ ಕಲಂ 371(ಜೆ)ಗೆ 12 ವರ್ಷಗಳು ಕಳೆದರೂ ಸಹ ಈ ಭಾಗದ ಜನರ ಜೀವನಮಟ್ಟದಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ ಕಂಡುಬಂದಿಲ್ಲ ಎಂದು ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ವಿಭಾಗೀಯ ಮಹಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಬೆಲ್ದಾರ್, ಕಲ್ಯಾಣ ಕರ್ನಾಟಕ ಪ್ರದೇಶವು ಇನ್ನೂ ದಾರಿದ್ರ್ಯ, ನಿರುದ್ಯೋಗ ಹಾಗೂ ಹಿಂದುಳಿತನದಿಂದ ಬಳಲುತ್ತಿದೆ ಎಂದು ಆರೋಪಿಸಿದ್ದಾರೆ.

ಗೋವಿಂದರಾವ್ ವರದಿಯ ಪ್ರಕಾರ ಈ ಭಾಗದ ಜನರ ಜೀವನಮಟ್ಟ ಮತ್ತಷ್ಟು ಹದಗೆಟ್ಟಿದ್ದು, ಸರ್ಕಾರಿ ಶಾಲೆಗಳಲ್ಲಿ ಸುಮಾರು 30 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಂದ ಆಸ್ಪತ್ರೆಗಳು ಬಿಕೋ ಎನ್ನುತ್ತಿವೆ. ಉದ್ಯೋಗಾವಕಾಶಗಳ ಕೊರತೆಯಿಂದ ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗುತ್ತಿದ್ದು, ಗ್ರಾಮೀಣ ಭಾಗದ ಜನರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ 12 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಅದರಲ್ಲಿ ಶೇಕಡಾ 40 ಕ್ಕಿಂತ ಕಡಿಮೆ ಮೊತ್ತಕ್ಕೆ ಮಾತ್ರ ಕ್ರಿಯಾ ಯೋಜನೆ ರೂಪಿಸಲಾಗಿದೆ. 2025-26ನೇ ಸಾಲಿನಲ್ಲಿ ಮಂಜೂರಾದ 5000 ಕೋಟಿ ರೂಪಾಯಿ ಅನುದಾನದಲ್ಲೂ ಕೇವಲ ಅಂದಾಜು 800 ಕೋಟಿ ರೂಪಾಯಿಗೆ ಮಾತ್ರ ಯೋಜನೆ ಸಿದ್ಧಪಡಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ಬಿಡುಗಡೆಯಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದ್ದು, ಈ ಕುರಿತು ಬೆಳಗಾವಿ ಅಧಿವೇಶನದಲ್ಲಿಯೂ ಆರೋಪ-ಪ್ರತ್ಯಾರೋಪಗಳು ನಡೆದಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಹಾಗೂ ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ, ರಾಯಚೂರು ವತಿಯಿಂದ ಮೇ 24ರಂದು ರವಿವಾರ ಬೆಳಗ್ಗೆ 11 ಗಂಟೆಗೆ ರಾಯಚೂರಿನ Sಐಗಿ ಕೊಠಾರಿ ಫಂಕ್ಷನ್ ಹಾಲ್‍ನಲ್ಲಿ ಕಲಂ 371(ಜೆ) ಹೋರಾಟಗಾರರು, ಜನಪರ ಸಂಘಟನೆಗಳು, ಚುನಾಯಿತ ಹಾಗೂ ಮಾಜಿ ಜನಪ್ರತಿನಿಧಿಗಳ ದುಂಡು ಮೇಜಿನ ಸಭೆ ಮತ್ತು ಸಮಾವೇಶವನ್ನು ಆಯೋಜಿಸಲಾಗಿದೆ.

ಸಭೆಗೆ ರಾಘವೇಂದ್ರ ಕುಷ್ಟಗಿ ಅಧ್ಯಕ್ಷತೆ ವಹಿಸಲಿದ್ದು, ಕಲ್ಯಾಣ ಕರ್ನಾಟಕದ ಹಿಂದುಳಿತನಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳ ಕುರಿತು ಚರ್ಚೆ ನಡೆಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರತಿ ಜಿಲ್ಲೆಯಿಂದ ಜನಪ್ರತಿನಿಧಿಗಳು, ಹೋರಾಟಗಾರರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಚಿಂತಕರು, ಸಾಹಿತಿಗಳು ಹಾಗೂ ಲೇಖಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಬೇಕೆಂದು ಅನಿಲ್ ಕುಮಾರ್ ಬೆಲ್ದಾರ್ ಮನವಿ ಮಾಡಿದ್ದಾರೆ.