Home ಜಿಲ್ಲೆ ವಿಬಿ ಜಿರಾಮ್‍ಜಿ ಜಾರಿಯಿಂದ ಭ್ರಷ್ಟರಿಗೆ ಭಯ: ಶಾಸಕ ಪ್ರಭು ಚವ್ಹಾಣ

ವಿಬಿ ಜಿರಾಮ್‍ಜಿ ಜಾರಿಯಿಂದ ಭ್ರಷ್ಟರಿಗೆ ಭಯ: ಶಾಸಕ ಪ್ರಭು ಚವ್ಹಾಣ

ಕಮಲನಗರ:ಫೆ.19:ಮನರೇಗಾ ಯೋಜನೆಯ ಮೂಲಕ ಸರ್ಕಾರವನ್ನು ಲೂಟಿ ಮಾಡುತ್ತಿದ್ದ ಭ್ರಷ್ಟರಿಗೆ ವಿಬಿ ಜಿರಾಮ್‍ಜಿ ಜಾರಿಯಿಂದಾಗಿ ಭಯ ಹುಟ್ಟಿಕೊಂಡಿದೆ ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಆರೋಪಿಸಿದರು.

ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲದ ವತಿಯಿಂದ ಫೆ.18ರಂದು ಕಮಲನಗರ ಪಟ್ಟಣದ ಎಂ.ಎ ಬಿರಾದಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಬಿ-ಜಿರಾಮ್‍ಜಿ ಯೋಜನೆಯ ಜನಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಲವರು ಮನರೇಗಾ ಮೂಲಕ ಗ್ರಾಮೀಣ ಭಾಗದ ಜನತೆಗೆ ಉದ್ಯೋಗದ ಭರವಸೆ ನೀಡಿ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಂಡಿದ್ದರು. ಸರಿಯಾದ ಸಮಯಕ್ಕೆ ಉದ್ಯೋಗಗಳು ಕೊಡುತ್ತಿರಲಿಲ್ಲ. ಸಕಾಲಕ್ಕೆ ಕೂಲಿ ಹಣ ಪಾವತಿಸುತ್ತಿರಲಿಲ್ಲ. ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರದ ಹಣ ದುರ್ಬಳಕೆ ಮಾಡುವುದು ವಿಪರೀತವಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಯೋಜನೆಯನ್ನು ವಿಬಿ ಜಿರಾಮ್‍ಜಿ ಎಂದು ಬದಲಾಯಿಸಿ ಅಕ್ರಮಗಳ ತಡೆಗೆ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು, ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ ಎಂದರು.

ಕೇಂದ್ರ ಸರ್ಕಾರದ ಜನಹಿತ ಕೆಲಸವನ್ನು ಸಹಿಸದ ಕಾಂಗ್ರೆಸ್‍ನವರು ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳುತ್ತಾ ಜನರಲ್ಲಿ ಗೊಂದಲವುಂಟು ಮಾಡಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದಕ್ಕೆಂದೇ ವಿಶೇಷ ಅಧಿವೇಶವನ್ನು ನಡೆಸಿದೆ. ರಾಜ್ಯಪಾಲರ ಮೂಲಕ ಸುಳ್ಳುಗಳನ್ನು ಹೇಳಿಸಲು ಯತ್ನಿಸಿದ್ದಾರೆ. ನಮ್ಮ ಕಾರ್ಯಕರ್ತರು ಕಾಂಗ್ರೆಸ್‍ನವರ ಹೇಳಿಕೆಗಳಿಗೆ ಜಗ್ಗದೇ ಜನತೆಗೆ ಸತ್ಯಾಂಶವನ್ನು ತಿಳಿಸಬೇಕು. ವಿಬಿ ಜಿರಾಮ್‍ಜಿ ಯೋಜನೆಯ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಹಿರಿಯ ಮುಖಂಡರಾದ ಗುರುನಾಥ ಜ್ಯಾಂತಿಕರ್ ಮಾತನಾಡಿ, ಕಾಂಗ್ರೆಸ್‍ಗೆ ಮಹಾತ್ಮ ಗಾಂಧೀಜಿಯ ಬಗ್ಗೆ ಯಾವುದೇ ರೀತಿಯ ಅಭಿಮಾನವಿಲ್ಲ. ಕೇವಲ ಜನರಲ್ಲಿ ಗೊಂದಲ ಹುಟ್ಟಿಸಲೆಂದೇ ವಿಬಿ-ಜಿರಾಮ್‍ಜಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹೊಸ ಯೋಜನೆ ಮೂಲಕ ಕೆಲಸದ ದಿನಗಳನ್ನು ಹೆಚ್ಚಿಸಲಾಗಿದೆ. ನಕಲಿ ಜಾಬ್ ಕಾರ್ಡ್, ಹಣ ದುರುಪಯೋಗಕ್ಕೆ ಕಡಿವಾಣ ಬಿದ್ದಿದೆ. ಹಾಜರಾತಿ, ಕಾಮಗಾರಿಯ ಸ್ಥಳ ಖಚಿತತೆಗೆ ತಂತ್ರಜ್ಞಾನದ ನೆರವು ಪಡೆಯಲಾಗಿದೆ ಎಂದು ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷಿ??ೀ ಕೌಟಗೆ ಅವರು ಮಾತನಾಡಿ, ‘ವಿಬಿ ಜಿರಾಮ್‍ಜಿ’ ಯೋಜನೆ ಕುರಿತು ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಅಪಪ್ರಚಾರ ನಡೆಯುತ್ತಿದೆ. ಪಕ್ಷದ ಕಾರ್ಯಕರ್ತರು ಜನರೆದುರು ಸತ್ಯಾಂಶವನ್ನು ಬಿಚ್ಚಿಡುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಪ್ರಾಸ್ತಾವಿಕ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರಹಂತ ಸಾವಳೆ, ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ರೈತ ಮೋರ್ಚಾ ಅಧ್ಯಕ್ಷ ಶಿವರಾಜ ಅಲ್ಮಾಜೆ, ಮೈನಾರಿಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಕೀರ್ ಶೇಖ್, ಮಹಿಳಾ ಮೋರ್ಚಾ ಆಧ್ಯಕ್ಷೆ ಶಕುಂತಲಾ ಮುತ್ತಂಗೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲಾ ಮಹೇಶ ಸಜ್ಜನ್, ಮುಖಂಡರಾದ ಧೊಂಡಿಬಾ ನರೋಟೆ, ವಸಂತ ಬಿರಾದಾರ, ಸತೀಷ ಪಾಟೀಲ, ರಂಗರಾವ ಜಾಧವ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಗಣೇಶ ಕಾರೆಗಾವೆ, ವಿಜಯಕುಮಾರ ದೇಶಮುಖ ಸೇರಿದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ ಸ್ವಾಗತಿಸಿದರು. ಕಮಲನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಂಟಿ ರಾಂಪೂರೆ ನಿರೂಪಿಸಿ ವಂದಿಸಿದರು.