Home ಜಿಲ್ಲೆ ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಮಡಿವಾಳ ಮಾಚಿದೇವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಗದಗ, ಫೆ6: ಮಡಿವಾಳ ಮಾಚಿದೇವರು 12 ನೇ ಶತಮಾನದ ಪ್ರಸಿದ್ಧ ವಚನಕಾರರು. ತಮ್ಮ ಕಾಯಕ ನಿಷ್ಟೆಯಿಂದ ಹಾಗೂ ವಚನಗಳ ಮೂಲಕ ಸಮಾಜದಲ್ಲಿ ತಾರತಮ್ಯ, ಅಂಕುಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಗಾಗಿ ಶ್ರಮಿಸಿದವರಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಡಿವಾಳ ಮಾಚಿದೇವರು ಜಗಜ್ಯೋತಿ ಬಸವಣ್ಣನವರ ತತ್ವಗಳಿಂದ ಪ್ರೇರಿತರಾದವರು. ಸಮಾಜದಲ್ಲಿ ಸಮಾನತೆಗಾಗಿ ತಮ್ಮ ವಚನಗಳ ಮೂಲಕ ಹೋರಾಡಿದವರು. ಶರಣರ ಬಟ್ಟೆಗಳನ್ನು ಮಡಿ ಮಾಡುವುದು ಇವರ ಕಾಯಕವಾಗಿತ್ತು. ಕಾಯಕನಿಷ್ಟರ, ಸದಾಚಾರವುಳ್ಳವರ ಶಿವಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುವ ನಿಷ್ಟುರ ವಚನಕಾರರಾಗಿದ್ದರು. ಇವರ ವಚನಗಳಲ್ಲಿನ ಸಂದೇಶಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ಶಿರಗುಂಪಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕಿ ಶ್ರೀಮತಿ ಸುಜಾತಾ ಮಡಿವಾಳರ ಅವರು ಉಪನ್ಯಾಸ ನೀಡುತ್ತಾ ಮಾತನಾಡಿ ಮಡಿವಾಳ ಮಾಚಿದೇವರು ವೀರನಿಷ್ಟೆಯ ಶರಣರಾಗಿದ್ದರು. ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ಪರುವತಯ್ಯ – ಸುಜ್ಞಾನವ್ವ ದಂಪತಿಗಳ ಪುತ್ರರಾಗಿದ್ದರು. ಕಲ್ಯಾಣ ಇವರ ಕಾರ್ಯಕ್ಷೇತ್ರವಾಗಿತ್ತು. ಆರಾಧ್ಯದೈವ ಕಲ್ಲಿನಾಥವಾಗಿದ್ದು ಕಾವ್ಯ ಪುರಾಣಗಳಲ್ಲಿ ಇವರನ್ನು ವೀರಭದ್ರನ ಅವತಾರವೆಂದು ಬಣ್ಣಿಸಲಾಗಿದೆ. ಶರಣರ ಬಟ್ಟೆಗಳನ್ನು ಶುಚಿ ಮಾಡುವುದು ಇವರ ಕಾಯಕವಾಗಿತ್ತು. ಇವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಅಸ್ಪೃಶ್ಯತೆ, ಅಂಧಕಾರ, ಮೂಡನಂಬಿಕೆ, ಅನಾಚಾರಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಶ್ರಮಿಸಿದರು ಎಂದು ತಿಳಿಸಿ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಅಪರ ಜಿಲ್ಲಾಧಿಕಾರಿ ಡಾ.ದುರಗೇಶ್ ಕೆ.ಆರ್, ಡಿವೈಎಸ್‍ಪಿ ವಿದ್ಯಾಧರ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ರಾಜು ಕಂಠಿಗೊಣ್ಣವರ, ಶ್ರೀಧರ ಚಿನಗುಂಡಿ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು, ಪ್ರಮುಖರು ಹಾಜರಿದ್ದರು.

ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪೆÇ್ರ. ಬಾಹುಬಲಿ ಜೈನರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.