ಪದಚ್ಯುತಿ ಮಸೂದೆ ಮಂಡನೆ

ನವದೆಹಲಿ,ಆ.೨೦- ಪ್ರತಿಪಕ್ಷಗಳ ಪ್ರಬಲ ವಿರೋಧದ ನಡುವೆ ಲೋಕಸಭೆಯಲ್ಲಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ವಿವಾದಾತ್ಮಕ ಮಸೂದೆಗಳನ್ನು ಮಂಡಿಸಿದರು. ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ೩೦ ದಿನಗಳ ಕಾಲ ಜೈಲುವಾಸ ಅನುಭವಿಸಿದ್ದರೆ ಪ್ರಧಾನಮಂತ್ರಿ, ಕೇಂದ್ರ ಸಚಿವ, ಮುಖ್ಯಮಂತ್ರಿಗಳು ಅಥವಾ ಕೇಂದ್ರ ಸಹಾಯಕ ಸಚಿವರನ್ನು ಪದಚ್ಯುತಗೊಳಿಸುವ ಮಸೂದೆಯನ್ನು ಮಂಡಿಸಲಾಗಿದೆ.


ಕೇಂದ್ರಾಡಳಿತ ಪ್ರದೇಶಗಳ (ತಿದ್ದುಪಡಿ)ಮಸೂದೆ, ಸಂವಿಧಾನದ (೧೩೦ನೇ ತಿದ್ದುಪಡಿ) ಮಸೂದೆ ಮತ್ತು ಜಮ್ಮು-ಕಾಶ್ಮೀರದ ಪುನರ್ ಸಂಘಟಿತ (ತಿದ್ದುಪಡಿ)ಮಸೂದೆಗಳನ್ನು ತೀವ್ರ ಗದ್ದಲ-ಕೋಲಾಹಲದ ನಡುವೆ ಗೃಹ ಸಚಿವರು ಮಂಡಿಸಿದರು.


ಈ ಮಸೂದೆಗಳಿಗೆ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಇತರ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸಲು ಈ ಮಸೂದೆ ಮಂಡಿಸಲಾಗುತ್ತಿದೆ. ಈ ಮಸೂದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಸರ್ಕಾರದ ವಿರುದ್ಧ ಮುಗಿಬಿದ್ದರು.


ಇದೇ ವೇಳೆ ಲೋಕಸಭೆಯಲ್ಲಿಂದು ಆನ್‌ಲೈನ್ ಗ್ಯಾಂಬ್ಲಿಂಗ್ ಮಸೂದೆ ಮಂಡಿಸಲಾಯಿತು. ಆದರೆ, ಪ್ರತಿಪಕ್ಷಗಳು ಗದ್ದಲ ಕೋಲಾಹಲ ಎಬ್ಬಿಸಿ ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದವು. ಸುಗಮ ಕಲಾಪಕ್ಕೆ ಉಭಯ ಸದನಗಳಲ್ಲೂ ಯತ್ನಿಸಲಾಯಿತು. ಆದರೆ, ಪ್ರತಿಪಕ್ಷಗಳ ಸದಸ್ಯರು ಕೋಲಾಹಲ ಎಬ್ಬಿಸಿದ್ದರಿಂದ ಉಭಯ ಸದನಗಳನ್ನೂ ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.


ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಸಂಸದರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.


ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳಿಗೆ ಅವಕಾಶ ಕಲ್ಪಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ಆರೋಪಿಸಲಾಗಿದೆ.


ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆಗೆ ತೀವ್ರ ಆಕ್ಷೇಪ ಮತ್ತು ಅಸಮಾಧಾನ ವ್ಯಕ್ತವಾಗಿದ್ದು ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಕ್ಕೆ ವೇದಿಕೆಯಾಗಿದೆ.


ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿ ಕೇಂದ್ರ ಸರ್ಕಾರದ ಈ ಕ್ರಮ ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುವ ಕ್ರಮ ಎಂದು ಹರಿಹಾಯ್ದಿದ್ದಾರೆ
ಸಂಸತ್ ಹೊರಭಾಗದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿ, ಎಲ್ಲದಕ್ಕೂ ವಿರುದ್ಧವಾದ ಮಸೂದೆ, ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಹೇಳುವುದು ಜನರ ಕಣ್ಣುಗಳಿಗೆ ಮುಸುಕನ್ನು ಎಳೆಯುವಂತಿದೆ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.


ಮಸೂದೆಯನ್ನು ನೆಪವಾಗಿಟ್ಟುಕೊಂಡು ವಿರೋಧ ಪಕ್ಷಗಳ ರಾಜ್ಯಗಳ ಮುಖ್ಯಮಂತ್ರಿಯ ಮೇಲೆ ಯಾವುದೇ ರೀತಿಯ ಪ್ರಕರಣ ಹಾಕಬಹುದು, ಅವರನ್ನು ೩೦ ದಿನಗಳವರೆಗೆ ಶಿಕ್ಷೆಯಿಲ್ಲದೆ ಬಂಧಿಸಬಹುದು ಮತ್ತು ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಬಹುದು ಎನ್ನುವ ಕೇಂದ್ರ ಸರ್ಕಾರದ ಕ್ರಮ ಸಂಪೂರ್ಣವಾಗಿ ಸಾಂವಿಧಾನಿಕ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಅತ್ಯಂತ ದುರದೃಷ್ಟಕರ ಎಂದಿದ್ದಾರೆ.


ಎಐಎಂಐಎಂ ನಾಯಕ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ಕಾನೂನು ಮತ್ತು ಸಂವಿಧಾನ ಬಾಹೀರವಾದುದು ಪ್ರಧಾನಿಯನ್ನು ಯಾರು ಬಂಧಿಸುತ್ತಾರೆ ಎಂದು ಪ್ರಶ್ನಿಸುತ್ತಾರೆ.


ಒಟ್ಟಾರೆಯಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಮಸೂದೆಗಳ ಮೂಲಕ ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ… ಅಧಿಕಾರ ಶಾಶ್ವತವಲ್ಲ ಎಂಬುದನ್ನು ಬಿಜೆಪಿ ಮರೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಆರ್‌ಜೆಡಿ ನಾಯಕ ನಾಯಕ ಸುಧಾಕರ್ ಸಿಂಗ್ ಪ್ರತಿಕ್ರಿಯೆ ನೀಡಿ “ದೇಶ ಸರ್ವಾಧಿಕಾರದತ್ತ ಸಾಗಲು ಹೆಜ್ಜೆ ಹಾಕುತ್ತಿದೆ. ಯಾವುದೇ ವ್ಯಕ್ತಿ ಅಧಿಕಾರದ ಸ್ಥಾಪನೆಗಳನ್ನು ಪ್ರಶ್ನಿಸಿದರೆ, ಅಂತಹ ಜನರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.


ಭಾರತ ಪಾಕಿಸ್ತಾನ ಮತ್ತು ಬಾಂಗ್ಲಾದೇಶವಾಗುವ ಅಂಚಿನಲ್ಲಿದೆ, ಅಲ್ಲಿ ವಿರೋಧ ಪಕ್ಷದ ನಾಯಕರು ಜೈಲಿನಲ್ಲಿ ಅಥವಾ ವಿದೇಶದಲ್ಲಿದ್ದಾರೆ. ಭಾರತದೊಳಗೆ ಅದೇ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ, ಇದನ್ನು ವಿರೋಧಿಸಲಾಗುವುದು ಎಂದು ತಿಳಿಸಿದ್ದಾರೆ.


ಕೇಂದ್ರ ಸರ್ಕಾರ ಪ್ರಕರಣ ದಾಖಲಿಸಿ ವಜಾಗೊಳಿಸುವುದಾಗಿ ಹೇಳುತ್ತಿದೆ. ಎಫ್‌ಐಆರ್ ದಾಖಲಿಸಿದರೆ, ಕೆಲವರು ರಾಜೀನಾಮೆ ನೀಡುತ್ತಾರೆ ಮತ್ತು ಕೆಲವರು ರಾಜೀನಾಮೆ ನೀಡುವುದಿಲ್ಲ, ಆದರೆ ಅವರನ್ನು ಶಿಕ್ಷಿಸುವ ಹಕ್ಕು ನಿಮಗೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಸಿಪಿಐ ಎಂ ಸಂಸದ ಅಮ್ರಾ ರಾಮ್ ಪ್ರತಿಕ್ರಿಯೆ ನೀಡಿ ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಪದಚ್ಯುತಗೊಳಿಸುವ ಮಸೂದೆ ೩೦ ದಿನಗಳ ಶಿಕ್ಷೆ ಆಧರಿಸಿದ್ದರೆ, ಎಲ್ಲರನ್ನೂ ಪದಚ್ಯುತಗೊಳಿಸಲಾಗುತ್ತದೆ. ೩೦ ದಿನಗಳ ಶಿಕ್ಷೆ ದೊಡ್ಡ ಅಪರಾಧವಲ್ಲ ಎಂದಿದ್ದಾರೆ.

ರಾಜ್ಯ ಸರ್ಕಾರ ಪತನಕ್ಕೆ ಹೊಸ ಮಸೂದೆ:ಟಿಎಂಸಿ

ವಿರೋಧಪಕ್ಷಗಳು ಅಧಿಕಾರದಲ್ಲಿರುವ ರಾಜ್ಯ ಸರ್ಕಾರಗಳನ್ನು ಉರುಳಿಸಲು ಕೇಂದ್ರ ಸರ್ಕಾರ ಹೊಸ ಮಸೂದೆ ತರುತ್ತಿದೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.


ಕನಿಷ್ಠ ೫ ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವಂಥ ಯಾವುದೇ ಗಂಭೀರ ಕ್ರಿಮಿನಲ್ ಆರೋಪದಲ್ಲಿ ಬಂಧಿತರಾಗಿ ೩೦ ದಿನಗಳ ಕಾಲ ಜೈಲಿನಲ್ಲಿದ್ದರೆ ಅಂಥವರ ಅಧಿಕಾರ ೩೧ನೇ ದಿನ ರದ್ದಾಗಲಿದೆ ಎಂಬುದು ಈ ಮಸೂದೆಯ ವಿಶೇಷ. ಪ್ರಧಾನಿ, ಮುಖ್ಯಮಂತ್ರಿ ಇಲ್ಲವೆ ಸಚಿವರು ಗಂಭೀರ ಆರೋಪ ಹೊತ್ತು ಸತತ ೩೦ ದಿನ ಬಂಧನದಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದೆ.


ರಾಜ್ಯಸಭೆಯ ಟಿಎಂಸಿ ಸಂಸದ ಸಾಕೇತ್ ಗೋಖಲೆ, ’ರಾಜ್ಯ ಸರ್ಕಾರಗಳನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೊಸ ತಂತ್ರವನ್ನು ರೂಪಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.


ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ’ಮತಗಳವು ಹಗರಣ ಬಯಲಿಗೆ ಬರುತ್ತಿದ್ದಂತೆ, ಮೋದಿ ಮತ್ತು ಶಾ ಜೋಡಿ ಹೊಸ ತಂತ್ರ ಹೂಡಿದೆ. ರಾಜ್ಯ ಸರ್ಕಾರಗಳನ್ನು ಉರುಳಿಸಲು ಸಿಬಿಐ ಮತ್ತು ಇಡಿಗೆ ಅವಕಾಶ ಕಲ್ಪಿಸುತ್ತಿದೆ’ ಎಂದು ಆರೋಪಿಸಿದ್ದಾರೆ.


’ಯಾವುದೇ ವ್ಯಕ್ತಿ ಶಿಕ್ಷೆಗೆ ಗುರಿಯಾದಾಗ ಮಾತ್ರ ಆತ ಅಪರಾಧಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯವರೆಗೂ ಅವರೊಬ್ಬ ’ಆರೋಪಿ’ಯಷ್ಟೇ. ಕೇವಲ ಆರೋಪದ ಆಧಾರದಲ್ಲಿ ಮುಖ್ಯಮಂತ್ರಿ ಅಥವಾ ಮಂತ್ರಿಗಳನ್ನು ಹುದ್ದೆಯಿಂದ ತೆಗೆಯಲಾಗದು. ಮೋದಿ-ಶಾ ಅವರ ಕೇಂದ್ರೀಯ ಏಜೆನ್ಸಿಗಳು ಬಂಧಿಸಿದರೆ ಮಾತ್ರ ಅದು ತಪ್ಪೆಸಗಿರುವುದಕ್ಕೆ ಪುರಾವೆಯಲ್ಲ’ ಎಂದಿದ್ದಾರೆ.


’ಆಸಕ್ತಿಕರ ವಿಷಯವೆಂದರೆ ಕಳೆದ ೧೧ ವರ್ಷಗಳಲ್ಲಿ ಕೇಂದ್ರ ಮತ್ತು ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳಲ್ಲಿ ಆಡಳಿತ ಪಕ್ಷದವರ ಒಬ್ಬರ ಬಂಧನವೂ ಆಗಿಲ್ಲ. ಉಳಿದೆಲ್ಲವೂ ವಿರೋಧ ಪಕ್ಷಗಳಿರುವ ರಾಜ್ಯಗಳಲ್ಲೇ ನಡೆದಿದೆ’ ಎಂದು ಆರೋಪಿಸಿದ್ದಾರೆ


ಟಿಎಂಸಿ ಸಂಸದ ಮಹುವಾ ಮೊಯಿತ್ರಾ ಪ್ರತಿಕ್ರಿಯಿಸಿ, ’ಈ ಮಸೂದೆಯು ಒಕ್ಕೂಟ ಸರ್ಕಾರ ಮತ್ತು ನ್ಯಾಯಾಂಗ ಎರಡನ್ನೂ ಕಡೆಗಣಿಸಿದೆ’ ಎಂದಿದ್ದಾರೆ.


’ಕೇವಲ ೨೪೦ ಸಂಸದರನ್ನು ಹೊಂದಿರುವ ಬಿಜೆಪಿ ಸಂವಿಧಾನವನ್ನು ಬದಲಿಸುತ್ತದೆ ಎಂಬ ವಿರೋಧಪಕ್ಷಗಳ ನಿರೀಕ್ಷೆ ನಿಜವಾಗಿದೆ. ವಿರೋಧಪಕ್ಷಗಳ ಆಡಳಿತವಿರುವ ಮುಖ್ಯಮಂತ್ರಿಗಳನ್ನು ಸುಳ್ಳು ಆರೋಪಗಳಡಿ ಇಡಿ ಮತ್ತು ಸಿಬಿಐ ಬಂಧಿಸಬಹದು ಮತ್ತು ನ್ಯಾಯಾಲಯ ಅಪರಾಧಿ ಎಂದು ಘೋಷಿಸುವ ಮೊದಲೇ ಅವರನ್ನು ಸ್ಥಾನದಿಂದ ಕಿತ್ತೊಗೆಯಬಹುದಾಗಿದೆ. ಇದು ಬಲಿಷ್ಠ ನ್ಯಾಯಾಂಗ ಹಾಗೂ ಒಕ್ಕೂಟ ರಚನೆಯ ಸರ್ಕಾರ ಇರುವ ರಾಷ್ಟ್ರದಲ್ಲೇ ಆಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ