
ಯಾದಗಿರಿ,ನ.೪: ಗುರುಮಠಕಲ್ ಪಟ್ಟಣದಲ್ಲಿ ರಾಜಾರೋಷವಾಗಿ ಮರಳು ಅಕ್ರಮ ಸಾಣೆ ದಂಧೆ ನಡೆಯುತ್ತಿದೆ ಕೇಳುವವರು ದಿಕ್ಕಿಲ್ಲ ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ವಿಪರ್ಯಾಸವೆಂದರೆ ತಹಸೀಲ್ದಾರ ಕಚೇರಿಯ ಹಿಂದುಗಡೆಯೇ ಅಕ್ರಮವಾಗಿ ಮರಳು ಸಂಗ್ರಹ ಮಾಡಿ ಅಲ್ಲಿಂದ ನಂಬರ್ ಪ್ಲೇಟ್ ಇಲ್ಲದ ಟ್ರಾಕ್ಟರ್ ಗಳಲ್ಲಿ, ರಾಜಾರೋಷವಾಗಿ ಸಾಗಣೆ ಮಾಡುತ್ತಿದ್ದಾರೆ. ವಾಹನಗಳು ಮಿತಿಮೀರಿದ ವೇಗದಲ್ಲಿ ಚಾಲನೆ ಮಾಡಿದರೂ ಸಹ ಸಂಬAಧಿಸಿದವರು ಕಂಡು ಕಾಣದಂತೆ ಸುಮ್ಮನೇ ಇರುವುದು. ಸಂಜೆಯಾದರೆ ಸಾಕು ಅಕ್ರಮ ಮರಳು ಇಲ್ಲಿಂದಲೇ ಎಲ್ಲ ಕಡೆ ಸಾಗಣೆಯಾಗುತ್ತದೆ. ಈ ಕುರಿತು ಹಲವು ಬಾರಿ ಪೊಲೀಸ್ ಇಲಾಖೆ ಗಮನಕ್ಕೂ ತಂದರೂ ಅವರು ಕ್ಯಾರೆ ಎನ್ನದೇ ಇರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಪಟ್ಟಣದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಒಂದೇ ಒಂದು ದಿನವೂ ಪರಿಶೀಲನೆ ಮಾಡಿಲ್ಲ, ಹಳೆ ತಹಸೀಲ ಕಚೇರಿ ಪಕ್ಕದಲ್ಲಿಯೇ ಪೊಲೀಸ್ ಜೀಪ್ ಇದ್ದರೂ ಅದರ ಮುಂದಿನಿAದಲೇ ಅಕ್ರಮ ಸಾಗಣೆ ನಡೆಯುತ್ತಿದ್ದರೂ ಸುಮ್ಮನಿರುವುದು ಕಂಡುಬರುತ್ತಿದೆ.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಎಸ್.ಪಿ.ಅವರು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದಲ್ಲಿ ಸಂಘಟನೆ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.






























