Home ಜಿಲ್ಲೆ ಕಿಲ್ಲನಕೇರಾದಲ್ಲಿ ಅಕ್ರಮ ಮರಳು ದಂಧೆ : ಪೊಲೀಸರು ಮೌನ ವಹಿಸಿದ್ದು ಏಕೆ .?

ಕಿಲ್ಲನಕೇರಾದಲ್ಲಿ ಅಕ್ರಮ ಮರಳು ದಂಧೆ : ಪೊಲೀಸರು ಮೌನ ವಹಿಸಿದ್ದು ಏಕೆ .?

ಯಾದಗಿರಿ :ಮೇ.೧೮:ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಂಗ್ರಹ ಹಾಗೂ ಸಾಗಾಟ ರಾಜಾರೋಷವಾಗಿ ನಡೆಯುತ್ತಿದ್ದು, ಮರಳು ದಂಧೆ ತಡೆಯಬೇಕಾದ ಸಂಬAಧಿತ ಇಲಾಖೆಗಳ ನಿರ್ಲಕ್ಷ್ಯ ಮತ್ತು ಮೌನವೇ ದಂಧೆಕೋರರಿಗೆ ಪರೋಕ್ಷ ಬೆಂಬಲವಾಗಿ ಪರಿಣಮಿಸಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
ಗ್ರಾಮದ ಹನುಮಂತ ಕೊಂಡಯ್ಯ ಅವರ ನೇತೃತ್ವದಲ್ಲೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಅವರ ಮನೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಅಪಾರ ಪ್ರಮಾಣದ ಮರಳು ಸಂಗ್ರಹ ಮಾಡಲಾಗಿದೆ ಎನ್ನಲಾಗಿದೆ. ಮನೆಯ ಮುಂಭಾಗದಲ್ಲೇ ಸುಮಾರು ೧೫೦ಕ್ಕೂ ಹೆಚ್ಚು ಟ್ರ‍್ಯಾಕ್ಟರ್ ಮರಳನ್ನು ರಾಶಿಯಾಗಿ ಹಾಕಲಾಗಿದ್ದು, ಹಿಂಭಾಗದಲ್ಲಿಯೂ ಸುಮಾರು ೪೦ಕ್ಕೂ ಅಧಿಕ ಟ್ರ‍್ಯಾಕ್ಟರ್ ಮರಳು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಹೆಸರು ಬಹಿರಂಗಪಡಿಸದ ಷರತ್ತಿನ ಮೇಲೆ ಮಾತನಾಡಿದ ಗ್ರಾಮಸ್ಥರು, “ಮನೆಯ ಮುಂದೆ ಇಷ್ಟೊಂದು ಪ್ರಮಾಣದ ಮರಳು ಸಂಗ್ರಹ ಇದ್ದರೂ ಅಧಿಕಾರಿಗಳು ಕಣ್ಣಾರೆ ನೋಡಿದಂತೆ ಮೌನ ವಹಿಸಿದ್ದಾರೆ. ಫೋಟೋ ತೆಗೆಯಲು ಹೋದರೂ ಜೀವ ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹೊರವಲಯ ಸೇರಿದಂತೆ ನೀಲಹಳ್ಳಿ, ಗೌಡಗೇರಾ ಹಾಗೂ ಕೂಡ್ಲೂರು ಭಾಗದ ಹಳ್ಳಗಳಿಂದ ರಾತ್ರಿ ವೇಳೆಯಲ್ಲಿ ಟ್ರ‍್ಯಾಕ್ಟರ್‌ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ರಾತ್ರಿ ಹೊತ್ತಿನಲ್ಲಿ ನಿರಂತರವಾಗಿ ಮರಳು ಸಾಗಾಟ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಹಾಗೂ ಸಂಬAಧಿತ ಅಧಿಕಾರಿಗಳು ಯಾವುದೇ ಕಟ್ಟುನಿಟ್ಟಿನ ತಪಾಸಣೆ ನಡೆಸದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ಭೂ ಮತ್ತು ಗಣಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗಳ ನಡುವೆ ಸಮನ್ವಯದ ಕೊರತೆಯೇ ಅಕ್ರಮ ಮರಳು ದಂಧೆ ವ್ಯಾಪಕವಾಗಲು ಪ್ರಮುಖ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನೊಂದೆಡೆ, ಮರಳು ದಂಧೆಯಲ್ಲಿ ತೊಡಗಿರುವವರು ಕೆಲ ಅಧಿಕಾರಿಗಳಿಗೆ ನಿಯಮಿತವಾಗಿ ಮಾಮೂಲಿ ನೀಡುತ್ತಿರುವುದರಿಂದಲೇ ಯಾವುದೇ ಕಾನೂನು ಕ್ರಮ ಜರುಗುತ್ತಿಲ್ಲ ಎಂಬ ಚರ್ಚೆಗಳು ಗ್ರಾಮದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.
ಅಕ್ರಮ ಮರಳು ಸಾಗಾಟ ಹಾಗೂ ಸಂಗ್ರಹದಲ್ಲಿ ತೊಡಗಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕು, ಅಕ್ರಮವಾಗಿ ಸಂಗ್ರಹಿಸಿರುವ ಮರಳಿನ ತಾಣಗಳನ್ನು ಸೀಜ್ ಮಾಡಬೇಕು ಹಾಗೂ ಸಂಬAಧಿತ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಪಾತ್ರ ಕುರಿತು ಉನ್ನತ ಮಟ್ಟದ ಇಲಾಖಾ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಗಂಭೀರ ಆರೋಪಗಳ ಹಿನ್ನೆಲೆ ಜಿಲ್ಲಾಡಳಿತ ಮತ್ತು ಸಂಬAಧಿತ ಇಲಾಖೆಗಳು ಯಾವ ರೀತಿಯ ಕ್ರಮ ಕೈಗೊಳ್ಳಲಿವೆ ಎಂಬುದನ್ನು ಸಾರ್ವಜನಿಕರು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.