Home ಜಿಲ್ಲೆ ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಅಬ್ಬರ : ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ

ಕೃಷ್ಣಾ ನದಿಯಲ್ಲಿ ಅಕ್ರಮ ಮರಳು ದಂಧೆ ಅಬ್ಬರ : ಅಧಿಕಾರಿಗಳ ಮೌನಕ್ಕೆ ಗ್ರಾಮಸ್ಥರ ಆಕ್ರೋಶ

ಸಂಜೆ ವಾಣಿ ವಾರ್ತೆ,
ಜಮಖಂಡಿ :ಏ.೯:ಕೃಷ್ಣಾ ನದಿ ಒಡಲು ಖಾಲಿಯಾಗುತ್ತಿದ್ದಂತೆಯೇ ತಾಲೂಕಿನ ನದೀತೀರ ಪ್ರದೇಶಗಳಲ್ಲಿ ಅಕ್ರಮ ಮರಳು ಮತ್ತು ಮಣ್ಣು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನದಿಯ ಸ್ವಾಭಾವಿಕ ಹರಿವು ಬದಲಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಮರಳು ಸಂಗ್ರಹಣೆ ಮತ್ತು ಸಾಗಾಣಿಕೆ ನಿರಂತರವಾಗಿ ನಡೆಯುತ್ತಿದ್ದರೂ ಸಂಬAಧಪಟ್ಟ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ಅತಿಯಾಗಿ ಮರಳು ತೆಗೆಯುವುದರಿಂದ ಭೂಕೊರೆತ ಉಂಟಾಗಿ ನದಿಪಾತ್ರ ಬದಲಾವಣೆಯ ಭೀತಿ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಅಕ್ರಮ ಇಟ್ಟಿಗೆ ಭಟ್ಟಿಗಳು ಸಹ ಮಣ್ಣನ್ನು ಅಕ್ರಮವಾಗಿ ತೆಗೆದು ಬಳಸುತ್ತಿದ್ದು, ಈ ಕಾರ್ಯಾಚರಣೆಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಪರಿಸರ ಹಾನಿ ಹೆಚ್ಚಾಗುತ್ತಿದೆ.
ಬೇಸಿಗೆಯ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನದಿಯಲ್ಲಿನ ನೀರಿನ ಮಟ್ಟವೂ ಕಡಿಮೆಯಾಗುತ್ತಿದ್ದು, ಉಳಿದಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಮರಳು ಗಣಿಗಾರಿಕೆಯಿಂದ ನದಿಯಲ್ಲಿನ ಜಲಚರ ಪ್ರಾಣಿಗಳು ಸಾವನ್ನಪ್ಪುತ್ತಿದ್ದು, ನೀರು ಮಲಿನವಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಹಿಪ್ಪರಗಿ ಬ್ಯಾರೇಜ್ ಕೆಳಭಾಗದಲ್ಲಿ ನೀರಿನ ಮಟ್ಟ ಕುಸಿಯುವುದು ಸಾಮಾನ್ಯ. ಈ ಸಮಯವನ್ನು ದುರುಪಯೋಗಪಡಿಸಿಕೊಂಡು ಕೆಲವರು ಭಾರಿ ವಾಹನಗಳ ಮೂಲಕ ಅಕ್ರಮ ಮರಳು ಸಾಗಾಣಿಕೆ ನಡೆಸುತ್ತಾರೆ. ಇದರಿಂದ ನದಿಯಲ್ಲಿ ಆಳವಾದ ಗುಂಡಿಗಳು ಉಂಟಾಗಿ, ಬಳಿಕ ನೀರು ಹರಿಸಿದಾಗ ಅವುಗಳಲ್ಲಿ ನೀರು ತುಂಬಿ ಮುಂದಿನ ಗ್ರಾಮಗಳಿಗೆ ನೀರು ತಲುಪದ ಸಮಸ್ಯೆ ಉಂಟಾಗುತ್ತದೆ. ಇದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಹೆಚ್ಚಾಗುತ್ತದೆ.
ಕೆಲವು ತಿಂಗಳುಗಳ ಹಿಂದೆ ಹಿಪ್ಪರಗಿ ಬ್ಯಾರೇಜ್‌ನ ೨೨ನೇ ಗೇಟ್ ನೀರಿನ ರಭಸಕ್ಕೆ ಹಾನಿಗೊಳಗಾದ ಪರಿಣಾಮ ಈಗಾಗಲೇ ಅಪಾರ ಪ್ರಮಾಣದ ನೀರು ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ದಂಧೆಯನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹಿಪ್ಪರಗಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿ ಅನೀಲ ಬಡಿಗೇರ ಅವರು, ನದೀತೀರದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಅಕ್ರಮ ಮರಳು ಹಾಗೂ ಮಣ್ಣು ದಂಧೆ ನಡೆಯುವ ಸ್ಥಳಗಳಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.