
ಸಂಜೆ ವಾಣಿ ವಾರ್ತೆ
ಜಮಖಂಡಿ:ಮಾ.೨೫:ಅರಣ್ಯ ಇಲಾಖೆಯ ಕೇಂದ್ರದ ಸುಪರ್ದಿಯಲ್ಲಿ ಬರುವ ಅಭಿವೃದ್ಧಿ ಹಾಗೂ ಹಸಿರು ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಆಗಮಿಸಿದ್ದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಬೆಂಗಳೂರು ಪ್ರಾದೇಶಿಕ ವಲಯದ ಐಜಿಎಫ್ ಫಾರೆಸ್ಟ್ ಜಯಕೃಷ್ಣ ವಿಕೆ ಅವರು ನಗರದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.
ನಗರಸಭೆಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಕೆಟ್ಟೆ ಕೆರೆಯ ಅರಣ್ಯ ವಸತಿ ಗೃಹದಲ್ಲಿ ಮಾತನಾಡಿದ ಅವರು, ಕೇಂದ್ರ ಅರಣ್ಯ ಸಚಿವಾಲಯದ ಬೆಂಗಳೂರು ವಲಯದ ಅಧಿಕಾರಿಗಳ ತಂಡವು ಗೋವಾ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ ಎಂದು ತಿಳಿಸಿದರು. ರಸ್ತೆ, ನೀರಿನ ತೊಟ್ಟಿಗಳು ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನವನ್ನು ತಂಡ ಪರಿಶೀಲಿಸುತ್ತದೆ ಎಂದರು.
ನಗರದ ಸಾಯಿಬಾಬಾ ಮಂದಿರದ ಸಮೀಪ ನಗರಸಭೆಯಿಂದ ಕೈಗೊಳ್ಳಲಾಗುತ್ತಿರುವ ಪೈಪ್‌ಲೈನ್ ಕಾಮಗಾರಿಯನ್ನೂ ವೀಕ್ಷಿಸಲಾಗಿದೆ. ಜನಪರ ನೀರಿನ ಸರಬರಾಜು ಉದ್ದೇಶದಿಂದ ಕೈಗೊಳ್ಳಲಾಗಿರುವ ಈ ಯೋಜನೆ ಒಂದು ಹೆಕ್ಟೇರ್‌ಗಿಂತ ಕಡಿಮೆ ಪ್ರದೇಶವನ್ನು ಒಳಗೊಂಡ ಸಣ್ಣ ಯೋಜನೆಯಾಗಿದೆ. ಸ್ಥಳ ಪರಿಶೀಲನೆ ವೇಳೆ ನೀರಿನ ಟ್ಯಾಂಕ್ ಹಾಗೂ ನೆಲದಡಿ ಅಳವಡಿಸಿರುವ ಪೈಪ್‌ಲೈನ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸಿದರು ಎಂದು ಹೇಳಿದರು.
ಅರಣ್ಯ ಭೂಮಿಯನ್ನು ಹೆದ್ದಾರಿ, ವಿದ್ಯುತ್, ನೀರು ಸೇರಿದಂತೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಬಳಸುವ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಇಲಾಖೆ ಪರಿಶೀಲನೆ ನಡೆಸುತ್ತದೆ. ಈ ಸಂಬAಧದ ಪ್ರಸ್ತಾವನೆಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಿ, ಸ್ಥಳ ಪರಿಶೀಲನೆಯ ನಂತರ ವರದಿಯನ್ನು ದೆಹಲಿ ಮುಖ್ಯ ಕಚೇರಿಗೆ ಸಲ್ಲಿಸಲಾಗುತ್ತದೆ. ಅರಣ್ಯ ಪ್ರದೇಶಗಳಲ್ಲಿ ಅಕ್ರಮ ಮರಕಟಾವು, ಅತಿಕ್ರಮಣ ಮುಂತಾದ ಸ್ಥಳೀಯ ಸಮಸ್ಯೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ರಾಜ್ಯ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ ಎಂದರು.
ಅರಣ್ಯ ಸಂರಕ್ಷಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿಭಿನ್ನ ಜವಾಬ್ದಾರಿಗಳು ಇರುವುದರಿಂದ, ಅದರ ಅನುಸಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಜ್ಯೋತಿ ಗಿರೀಶ, ವಲಯ
ಅರಣ್ಯ ಅಧಿಕಾರಿ ಕಿರಣ ದಾಸರೆಡ್ಡಿ,ಉಪ ವಲಯ ಅರಣ್ಯ ಅಧಿಕಾರಿ ವಿನೋದ ಜೈನಾಪುರ, ಗಸ್ತು ಅರಣ್ಯ ಪಾಲಕ ಸಿದ್ದು ಕುಳಲಿ, ಸೇರಿದಂತೆ ಇತರರು ಉಪಸ್ಥಿತರಿದ್ದರು






















