
ಸಂಜೆವಾಣಿ ವಾರ್ತೆ
ವಿಜಯಪುರ, ಮಾ. ೭: ಧರ್ಮಗಳ ಆಚರಣೆಗಳು ಬೇರೆಯಾಗಿದ್ದರೂ ಮನುಷ್ಯತ್ವ ಮತ್ತು ಸೌಹಾರ್ದತೆಯ ಸಂದೇಶ ಒಂದೇ ಆಗಿದೆ. ಬಸವಣ್ಣನವರ ತತ್ವ ಮತ್ತು ಇಸ್ಲಾಂ ಧರ್ಮದ ಸೋದರತ್ವದ ಗುಣಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿವೆ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಜಾಮಿಯಾ ಶಾದಿ ಮಹಲ್‌ನಲ್ಲಿ ರಾಷ್ಟ್ರೀಯ ಬಸವಸೈನ್ಯ ಹಾಗೂ ಜಮಾತ್-ಎ-ಇಸ್ಲಾಂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ಇಫ್ತಿಯಾರ್ ಸೌಹಾರ್ದ ಕೂಟ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಸವಣ್ಣನವರ ಜನ್ಮಭೂಮಿಯಲ್ಲಿ ಇಂತಹ ಸೌಹಾರ್ದ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ವಿಷಯ. ಜಾತಿ, ಮತದ ಭೇದ ಮರೆತು ಸಹಬಾಳ್ವೆಯ ಸಂದೇಶ ಸಾರಲು ಇಂತಹ ವೇದಿಕೆಗಳು ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ರಾಂತ ಪ್ರಾಶುಪಾಲ ಸುರೇಶಗೌಡ ಪಾಟೀಲ, “ರಂಜಾನ್ ಮಾಸವು ಶಿಸ್ತು, ದಾನ ಮತ್ತು ಪ್ರೀತಿಯನ್ನು ಕಲಿಸುತ್ತದೆ. ಬಸವತತ್ವದ ‘ಇವ ನಮ್ಮವ’ ಎಂಬ ಸಾರವನ್ನೇ ಈ ಕೂಟವು ಪ್ರತಿಬಿಂಬಿಸುತ್ತಿದೆ” ಎಂದರು. ಉಪನ್ಯಾಸಕ ಎಂ.ಡಿ. ಬಳಗಾನೂರ ಮಾತನಾಡಿ, “ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕಾಗಿ ರಾಷ್ಟ್ರೀಯ ಬಸವಸೈನ್ಯ ಹೋರಾಡುವಾಗ ಮುಸ್ಲಿಂ ಸಮುದಾಯದವರು ಬೆಂಬಲ ನೀಡಿದ್ದೇವೆ. ಪ್ರಾಧಿಕಾರದಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ” ಎಂದು ತಿಳಿಸಿದರು. ಹಿರಿಯ ಸಾಹಿತಿ ಲ.ರು. ಗೊಳಸಂಗಿ ಮಾತನಾಡಿ, ಎಲ್ಲ ಧರ್ಮದವರು ಸೇರಿ ಸ್ನೇಹ ಹಂಚಿಕೊಳ್ಳುವ ಈ ಕಾರ್ಯಕ್ರಮ ಬಸವನಾಡಿಗೆ ಹೆಮ್ಮೆ ತರುವಂತದ್ದು ಎಂದರು.
ಈ ಸಂದರ್ಭದಲ್ಲಿ ಜಮಾತ್-ಎ-ಇಸ್ಲಾಂ ಅಧ್ಯಕ್ಷ ಸಲೀಂ ಸಯ್ಯದ ಮಾತನಾಡಿದರು ಶ್ರೀ ಬಸವೇಶ್ವರ ಕೋ-ಆಪ್ ಬ್ಯಾಂಕಿನ ಅಧ್ಯಕ್ಷರಾದ ಲೋಕನಾಥ ಅಗರವಾಲ, ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ಶಿವನಗೌಡ ಬಿರಾದಾರ, ಸಂಗಮೇಶ ಓಲೇಕಾರ, ಜಾಮಿಯಾ ಮಸ್ಜಿದ್ ಅಧ್ಯಕ್ಷ ಡಾ. ಶಬ್ಬೀರ ನದಾಫ, ಜನತಾ ಬಜಾರ ಅಧ್ಯಕ್ಷ ಬಾಲಚಂದ್ರ ಮುಂಜಾನೆ, ಮಾಜಿ ಪುರಸಭೆ ಅಧ್ಯಕ್ಷ ಬಸಣ್ಣ ಕಲ್ಲೂರ, ಮುಖಂಡರಾದ ಕಮಲಸಾಬ್ ಕೊರಬು, ಶ್ರೀಕಾಂತ ಕೊಟ್ರಶೆಟ್ಟಿ, ಚಾಂದ ಕೊರಬು ಅಲ್ತಾಪ ಮುದ್ದೇಬಿಹಾಳ,ಮಹ್ಮದಅಲಿ ಮಿಲ್ಲಿ.ಸೇರಿದಂತೆ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಜಾಕಿರ ನದಾಫ್ ಅವರು ನಿರೂಪಿಸಿ ವಂದಿಸಿದರು,ಎಲ್ಲರೂ ಒಟ್ಟಾಗಿ ಕುಳಿತು ಫಲಾಹಾರ ಸೇವಿಸುವ ಮೂಲಕ ಸೌಹಾರ್ದತೆಯನ್ನು ಮೆರೆದರು




















