ತಂಟೆಗೆ ಬಂದರೆ ತಕ್ಕ ಶಾಸ್ತಿ

ಬಿಕೇನಾರ್, ಮೇ.೨೨- ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ೨೬ ಪ್ರವಾಸಿಗರನ್ನು ಭಯೋತ್ಪಾದಕರು ಹತ್ಯೆಮಾಡಿದ ಬಳಿಕ ನನ್ನ ನರನಾಡಿಗಳೆಲ್ಲ ಕುದಿಯುತ್ತಿದ್ದವು.ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.


ಭಾರತೀಯ ಸಶಸ್ತ್ರ ಪಡೆಗಳು ಕೇವಲ ೨೨ ನಿಮಿಷಗಳಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ೯ ಭಯೋತ್ಪಾದನಾ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿ ಭಾರತದ ತಂಟೆಗೆ ಬಂದರೆ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಪಾಕಿಸ್ತಾನ ಮತ್ತು ಜಗತ್ತಿಗೆ ತೋರಿಸಿ ಕೊಟ್ಟಿವೆ ಎಂದು ಹೇಳಿದ್ದಾರೆ.


ಅಮೃತ್ ಭರತ್ ಯೋಜನೆ ಅಡಿ ದೇಶದ ೧೦೩ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನೂರಕ್ಕೂ ಅಧಿಕ ಭಯೋತ್ಪಾದಕರನ್ನು ಸೇನಾ ಪಡೆಗಳು ಹತ್ಯೆ ಮಾಡುವ ಮೂಲಕ ಮಹಿಳೆಯರ ಸಿಂಧೂರ ಅಳಿಸಿದ ಉಗ್ರರಿಗೆ ತಕ್ಕ ಪಾಠ ಕಲಿಸಿವೆ ಎಂದು ಹೇಳಿದ್ದಾರೆ.


ಅದರಲ್ಲಿಯೂ ಸಹೋದರಿಯರನ್ನು ಧರ್ಮ ಕೇಳಿ ಅವರ ಕಣ್ಣಮುಂದೆಯೇ ಅವರ ಗಂಡಂದಿರನ್ನು ಹತ್ಯೆ ಮಾಡಿದ್ದು ತಮ್ಮಲ್ಲಿ ಆಕ್ರೋಶಕ್ಕೂ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ.


ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪ


ದೇಶವನ್ನು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಆಧುನಿಕ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ದಿಯ ಮಹಾಯಜ್ಞ’ ನಡೆಯುತ್ತಿದೆ ಎಂದು ಹೇಳಿದ್ದಾರೆ.


ದೇಶದಲ್ಲಿ ಮೂಲಸೌಕರ್ಯ ಕಾರ್ಯಗಳಿಗೆ ಮೊದಲಿಗಿಂತ ಆರು ಪಟ್ಟು ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ.ದೇಶದಲ್ಲಿ ರೈಲ್ವೆ ಜಾಲ ಆಧುನೀಕರಿಸಲಾಗುತ್ತಿದೆ. ವಂದೇ ಭಾರತ್, ಅಮೃತ್ ಭಾರತ್ ಮತ್ತು ನಮೋ ಭಾರತ್ ರೈಲುಗಳು ರಾಷ್ಟ್ರದ ಹೊಸ ವೇಗ ಮತ್ತು ಪ್ರಗತಿಯನ್ನು ಸಂಕೇತವಾಗಿದೆ ಎಂದಿದ್ದಾರೆ


ದೇಶದಲ್ಲಿ ಬ್ರಾಡ್‌ಗೇಜ್ ಹಳಿಗಳಲ್ಲಿ ಮಾನವರಹಿತ ರೈಲ್ವೆ ಕ್ರಾಸಿಂಗ್ ತೆಗೆದುಹಾಕುವ ಕೆಲಸ ನಡೆಯುತ್ತಿದೆ.. ೧೩೦೦ ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಏಕಕಾಲದಲ್ಲಿ ಆಧುನೀಕರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.


ದೇಶದಲ್ಲಿ ೧೦೦ ಕ್ಕೂ ಹೆಚ್ಚು ಅಮೃತ ಭಾರತ ನಿಲ್ದಾಣಗಳು ಸಿದ್ಧವಾಗಿವೆ. ಸಾಮಾಜಿಕ ಮಾಧ್ಯಮದಲ್ಲಿರುವ ಜನರು ಈ ರೈಲು ನಿಲ್ದಾಣಗಳ ಸ್ಥಿತಿ ಮೊದಲು ಹೇಗಿತ್ತು ಎಂಬುದನ್ನು ನೋಡುತ್ತಿದ್ದಾರೆ ಮತ್ತು ಈಗ ಅವುಗಳ ಚಿತ್ರಣ ಬದಲಾಗಿದೆ ಎಂದಿದ್ದಾರೆ.


೨೬ ಸಾವಿರ ಕೋಟಿ ಮೊತ್ತದ ಯೋಜನೆ


ರಾಜಸ್ಥಾನದ ಬಿಕಾನೇರ್‌ನಲ್ಲಿ ಪುನರಾಭಿವೃದ್ಧಿಗೊಳಿಸಿದ ದೇಶ್ನೋಕ್ ನಿಲ್ದಾಣವನ್ನು ಉದ್ಘಾಟಿಸಿದರು, ಇದೇ ವೇಳೆ ೨೬,೦೦೦ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅವರು ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.


ದೇಶದ ೮೬ ಜಿಲ್ಲೆಗಳಲ್ಲಿ ೧,೧೦೦ ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ’ಅಮೃತ ಭಾರತ ನಿಲ್ದಾಣ ಯೋಜನೆ’. “೧,೩೦೦ ಕ್ಕೂ ಹೆಚ್ಚು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುವ ಗುರಿಹೊಂದಿದ್ದು ಅದರ ಭಾಗವಾಗಿ ೧೦೨ ನವೀಕೃತ ರೈಲು ನಿಲ್ದಾಣಗಳನ್ನು ಪ್ರಧಾನಿ ಉದ್ಘಾಟಿಸಿದರು.


ಕರ್ಣಿ ಮಾತೆಗೆ ನಮನ


ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶ್ನೋಕೆಯಲ್ಲಿರುವ ಕರ್ಣಿ ಮಾತಾ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ರೈಲು ನಿಲ್ದಾಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.


ಈ ವೇಳೆ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ಅರ್ಜುನ್ ರಾಮ್ ಮೇಘವಾಲ್, ರಾಜಸ್ತಾನದ ರಾಜ್ಯಪಾಲ ಹರಿಬಾಬು ಬಾಗಡೆ ಹಾಗು ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಮತ್ತಿತರು ಉಪಸ್ಥಿತರಿದ್ದರು


ಅಮೃತ ಭಾರತ ನಿಲ್ದಾಣ ಯೋಜನೆಯಡಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನವೀಕರಿಸಿದ ಕರ್ನಾಟಕದ ಮುನಿರಾಬಾದ್ ರೈಲು ನಿಲ್ದಾಣ ( ಹುಲಿಗಿ ಕೊಪ್ಪಳ), ಬಾಗಲಕೋಟೆ ರೈಲು ನಿಲ್ದಾಣ, ಗದಗ ಜಂಕ್ಷನ್ ರೈಲು ನಿಲ್ದಾಣ ,ಗೋಕಾಕ್ ರಸ್ತೆ ರೈಲು ನಿಲ್ದಾಣ ಹಾಗು ಧಾರವಾಡ ರೈಲು ನಿಲ್ದಾಣ ಸೇರಿದಂತೆ ದೇಶದ ೧೮ ರಾಜ್ಯಗಳಲ್ಲಿ ೧೦೩ ರೈಲ್ವೆ ನಿಲ್ದಾಣಗಳನ್ನು ಪ್ರಯಾಣಿಕರ ಅನುಕೂಲಕ್ಕಾಗಿ ರಾಷ್ಟ್ರಕ್ಕೆ ಸಮರ್ಪಿಸಿ ಬಿಕೇನಾರ್ – ಮುಂಬೈ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದರು.

ಪ್ರಾದೇಶಿಕ ವಾಸ್ತು ಶಿಲ್ಪಕ್ಕೆ ಆದ್ಯತೆ


ಅಮೃತ ಭಾರತ್ ರೈಲು ಯೋಜನೆಯಡಿಯಲ್ಲಿ ಪ್ರಾದೇಶಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸಲು ಮತ್ತು ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ಆಧುನಿಕ ಸೌಲಭ್ಯಗಳೊಂದಿಗೆ ಪುನರಾಭಿವೃದ್ಧಿ ಅಡಿಯಲ್ಲಿ ೧೦೩ ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.


ಕರ್ಣಿ ಮಾತಾ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಸೇವೆ ಸಲ್ಲಿಸುವ ದೇಶ್ನೋಕ್ ರೈಲು ನಿಲ್ದಾಣ ದೇವಾಲಯದ ವಾಸ್ತುಶಿಲ್ಪ ಮತ್ತು ಕಮಾನು ಮತ್ತು ಸ್ತಂಭದ ಥೀಮ್‌ನಿಂದ ಪ್ರೇರಿತವಾಗಿದೆ” ಎಂದು ಅದು ಹೇಳಿದೆ.


ತೆಲಂಗಾಣದ ಬೇಗಂಪೇಟೆ ರೈಲು ನಿಲ್ದಾಣ ಕಾಕತೀಯ ಸಾಮ್ರಾಜ್ಯದ ವಾಸ್ತುಶಿಲ್ಪದ ಅಂಶಗಳನ್ನು ಹೊಂದಿದೆ. ಬಿಹಾರದ ಥಾವೆ ನಿಲ್ದಾಣ ೫೨ ಶಕ್ತಿಪೀಠಗಳಲ್ಲಿ ಒಂದಾದ ಮಾ ತಾವೇವಾಲಿ ಮತ್ತು ಮಧುಬನಿ ವರ್ಣಚಿತ್ರಗಳಿಗೆ ಸಂಬಂಧಿಸಿದ ವಿವಿಧ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದೆ
ಪುನರಾಭಿವೃದ್ಧಿಗೊಳಿಸಲಾದ ’ಅಮೃತ್’ ನಿಲ್ದಾಣಗಳು ಆಧುನಿಕ ಮೂಲಸೌಕರ್ಯವನ್ನು ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಯೋಜಿಸುತ್ತವೆ, ’ದಿವ್ಯಾಂಗಜನ’ ಸೇರಿದಂತೆ ಪ್ರಯಾಣಿಕ ಕೇಂದ್ರಿತ ಸೌಲಭ್ಯಗಳನ್ನು ಹೊಂದಿವೆ ಮತ್ತು ಸರ್ಕಾರದ ಪ್ರಕಾರ ಸುಸ್ಥಿರ ಅಭ್ಯಾಸಗಳಿಗೆ ಬದ್ಧವಾಗಿವೆ ಎಂದು ತಿಳಿಸಿದೆ