Home ಜಿಲ್ಲೆ ಕಲಬುರಗಿ ಅ. 27ರೊಳಗೆ ನೀರು ಹರಿಸದಿದ್ದರೆ ಜಲಾಶಯದ ಗೇಟ್‍ಗಳನ್ನು ಎತ್ತುತ್ತೇವೆ: ಗೌತಮ್ ಪಾಟೀಲ ಎಚ್ಚರಿಕೆ

ಅ. 27ರೊಳಗೆ ನೀರು ಹರಿಸದಿದ್ದರೆ ಜಲಾಶಯದ ಗೇಟ್‍ಗಳನ್ನು ಎತ್ತುತ್ತೇವೆ: ಗೌತಮ್ ಪಾಟೀಲ ಎಚ್ಚರಿಕೆ

ಚಿಂಚೋಳಿ: ತಾಲೂಕಿನಲ್ಲಿ ತೀವ್ರ ಬರ ಹಾಗೂ ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅರಿಶಿನ, ಕಬ್ಬು ಮತ್ತು ತೊಗರಿ ಬೆಳೆಗಳು ಒಣಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಳೆಗಳನ್ನು ರಕ್ಷಿಸಲು ಅಕ್ಟೋಬರ್ 27ರೊಳಗೆ ಚಂದ್ರಂಪಳ್ಳಿ ಹಾಗೂ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳ ಮೂಲಕ ನದಿ ಮತ್ತು ಕಾಲುವೆಗಳಿಗೆ ನೀರು ಹರಿಸಬೇಕು. ಒಂದು ವೇಳೆ ನೀರು ಹರಿಸದಿದ್ದರೆ ರೈತರೇ ಜಲಾಶಯದ ಮುಖ್ಯ ಗೇಟ್‍ಗಳನ್ನು ತೆರೆದು ನೀರು ಬಿಡಿಸಿಕೊಳ್ಳುತ್ತಾರೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗೌತಮ್ ಪಾಟೀಲ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಂಪಳ್ಳಿ ಮತ್ತು ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳವರೆಗೂ ನೀರು ಹರಿಸಿದರೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಯೋಜನೆಯ ಅಧಿಕಾರಿಗಳೇ ತಿಳಿಸಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ನೀರು ಹರಿಸಲು ಸೂಚನೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಚಿಂಚೋಳಿ ತಾಲೂಕಿನ ರೈತರು ಬೆಳೆದ ಬೆಳೆಗಳನ್ನು ರಕ್ಷಿಸಲು ನೀರಿನ ಅಗತ್ಯವಿದ್ದರೂ, ಸೇಡಂ ತಾಲೂಕಿನ ಸಿಮೆಂಟ್ ಕಾರ್ಖಾನೆಗಳಿಗೆ ಮಾತ್ರ ನೀರು ಹರಿಸಲಾಗುತ್ತಿದೆ ಎಂದು ದೂರಿದರು.
ಚಂದನಕೇರಾ, ಗಡಿನಿಂಗದಳ್ಳಿ, ಚೆನ್ನೂರು, ನಿಡಗುಂದಾ, ಚಿಮ್ಮನಚೋಡ ಹಾಗೂ ಐನಾಪುರ ಗ್ರಾಮಗಳಲ್ಲಿ ಕೊಳವೆಬಾವಿಗಳು ಬತ್ತಿಹೋಗಿದ್ದು, ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಘೋಷಿಸಿರುವ ಪರಿಹಾರದ ಹಣವೂ ಇನ್ನೂ ರೈತರ ಖಾತೆಗಳಿಗೆ ಜಮೆಯಾಗಿಲ್ಲ ಆದ್ದರಿಂದ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಮಧ್ಯಪ್ರವೇಶಿಸಿ, ರೈತರ ಬೆಳೆಗಳನ್ನು ಉಳಿಸಲು ನೀರಾವರಿ ಯೋಜನೆಗಳಿಂದ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಗೌತಮ್ ಪಾಟೀಲ ಆಗ್ರಹಿಸಿದರು.
ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು: ಗೋಪಾಲರಾವ ಕಟ್ಟಿಮನಿ
ನೀರು ಬಳಕೆದಾರರ ಸಂಘದ ಅಧ್ಯಕ್ಷರಾದ ಗೋಪಾಲರಾವ ಕಟ್ಟಿಮನಿ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ರೈತರ ಸಂಕಷ್ಟಕ್ಕೆ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಚಿಂಚೋಳಿ ತಾಲೂಕಿನ ರೈತರ ಬೆಳೆಗಳಿಗೆ ನೀರು ಒದಗಿಸುವ ಬದಲು ಸೇಡಂ ತಾಲೂಕಿನ ಸಿಮೆಂಟ್ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು. ಕೂಡಲೇ ರೈತರ ಹಿತದೃಷ್ಟಿಯಿಂದ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ವಿದ್ಯುತ್ ಉಪಕೇಂದ್ರಗಳನ್ನು ಆರಂಭಿಸಲು ಒತ್ತಾಯ
ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀಮಂತ ಕಟ್ಟಿಮನಿ ಮಾತನಾಡಿ, ಚಿಂಚೋಳಿ ತಾಲೂಕಿನ ಕೊಳ್ಳೂರು ಮತ್ತು ಶಾದೀಪುರ ಗ್ರಾಮಗಳಲ್ಲಿ ವಿದ್ಯುತ್ ಉಪಕೇಂದ್ರಗಳು ಮಂಜೂರಾಗಿದ್ದರೂ, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ ಎಂದು ತಿಳಿಸಿದರು. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ವಿದ್ಯುತ್ ಅತ್ಯಗತ್ಯವಾಗಿದೆ. ಆದ್ದರಿಂದ ಮಂಜೂರಾಗಿರುವ ವಿದ್ಯುತ್ ಉಪಕೇಂದ್ರಗಳ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಿ, ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು
ಸುದ್ದಿಗೋಷ್ಠಿಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡರಾದ ಕೆ.ಎಂ. ಬಾರಿ, ಚಿತ್ರಶೇಖರ ಪಾಟೀಲ, ಸಂತೋಷ ಗಡಂತಿ, ಅಶೋಕ ಚೌವ್ಹಾಣ, ಪರ್ವತ್ ದೇಸಾಯಿ,
ಗೋಪಾಲರೆಡ್ಡಿ ಕೊಳ್ಳೂರು, ಶಿವಕುಮಾರ ಪೆÇೀಚಲಿ, ಶಂಕರ ರಾಠೋಡ, ರಂಗಣ್ಣ ಪೆÇಲೀಸ್, ಸಂತೋಷರೆಡ್ಡಿ ಹಾಗೂ ಸತೀಶಕುಮಾರ ಇಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.