
ಕಲಬುರಗಿ:ವಿಶ್ವಕರ್ಮ ಮಹಾ ಒಕ್ಕೂಟ ರಾಜ್ಯ ಘಟಕದ ಅಧೀನದಲ್ಲಿನ ಕಲಬುರಗಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮತ್ತು ಪದಗ್ರಹಣ ಕಾರ್ಯಕ್ರಮವು ಕಲಬುರಗಿ ಮಹಾನಗರದಲ್ಲಿ ವಿಜೃಂಭಣೆಯಿಂದ ಜರುಗಿತು. ಸಮಾರಂಭವನ್ನು ಒಕ್ಕೂಟದ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಪತ್ತಾರ (ಕನಕಗಿರಿ) ಅವರು ಉದ್ಘಾಟಿಸಿ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ ಪತ್ತಾರ ಅವರು, ವಿಶ್ವಕರ್ಮ ಸಮುದಾಯವು ಸಮ ಸಮಾಜ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯ ಪಡೆಯಬೇಕಾದರೆ ಸಂಘಟನೆ, ಜಾಗೃತಿ ಮತ್ತು ಅರಿವು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಹಿಂದುಳಿದ ವರ್ಗಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ವಿಶ್ವಕರ್ಮ ಸಮಾಜವು ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ನಿರಂತರ ಅನ್ಯಾಯಕ್ಕೆ ಒಳಗಾಗುತ್ತಿರುವುದು ದುಃಖಕರ ಸಂಗತಿಯಾಗಿದೆ ಎಂದು ಅವರು ಹೇಳಿದರು.
ವಿಶ್ವಕರ್ಮ ಸಮಾಜವು ಪಂಚಕಸಬುಗಳ ಮೂಲಕ ಈ ನಾಡಿಗೆ ಅಪಾರ ಸೇವೆ ಸಲ್ಲಿಸಿದೆ. ಕಾಯಕವೇ ಧರ್ಮವೆಂದು ನಂಬಿ ದುಡಿಯುವ ಈ ಸಮುದಾಯವನ್ನು ಸ್ವಾತಂತ್ರ್ಯ ಬಂದ 78 ವರ್ಷಗಳಾದರೂ ಆಡಳಿತ ವರ್ಗಗಳು ಹಾಗೂ ರಾಜಕೀಯ ಪಕ್ಷಗಳು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಂಡಿವೆ ಎಂದು ವಿಜಯಕುಮಾರ ಪತ್ತಾರ ಕಟುವಾಗಿ ಟೀಕಿಸಿದರು. ಇಂತಹ ಸ್ಥಿತಿಯಲ್ಲಿ ಸಂಘಟನೆ ಬಲವರ್ಧನೆ ಮಾಡಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ನ್ಯಾಯಯುತವಾಗಿ ಪಡೆದುಕೊಳ್ಳಬೇಕೆಂದು ಅವರು ಕರೆ ನೀಡಿದರು.
ಈ ಸಮಾರಂಭದಲ್ಲಿ ಕಲಬುರಗಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ವಿಶ್ವಕರ್ಮ ಸಮಾಜದ ಸರ್ವ ಬಾಂಧವರ ಸಮ್ಮುಖದಲ್ಲಿ ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಅಧ್ಯಕ್ಷರಾಗಿ ಶ್ರೀ ಮಾರುತಿ ಎಂ. ಕಮ್ಮಾರ್, ಜಿಲ್ಲಾ ಗೌರವಾಧ್ಯಕ್ಷರಾಗಿ ಮೋನಪ್ಪ ಚಿಂಚನಸೂರ್, ನಗರ ಅಧ್ಯಕ್ಷರಾಗಿ ಮಂಜುನಾಥ ದಂಡೋತಿ, ಜಿಲ್ಲಾ ಸಂಚಾಲಕರಾಗಿ ಮಹೇಶ್ ಸುಲ್ತಾಪುರ್, ದತ್ತು ಕುಮಾರ್ ಸುತಾರ್ ಮತ್ತು ಮಲ್ಲು ಭೀಮಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಉಪಾಧ್ಯಕ್ಷರಾಗಿ ರಾಜಶೇಖರ್ ವಿಶ್ವಕರ್ಮ ಮತ್ತು ಸುಧಾಕರ್ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶ್ ಎಂ. ಕಮ್ಮಾರ್, ಜಿಲ್ಲಾ ಖಜಾಂಚಿಯಾಗಿ ಶ್ರೀನಿವಾಸ್ ಬಡಿಗೇರ್, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾಗಿ ಸಂಗೀತಾ ನಾಗರಾಜ್ ಪಂಚಾಳ್ ಅವರನ್ನು ಆಯ್ಕೆ ಮಾಡಿ ಪದಗ್ರಹಣ ಮಾಡಿಸಲಾಯಿತು.
ಕಾರ್ಯಕ್ರಮದಲ್ಲಿ ಯಾದಗಿರಿ-ಕಲಬುರಗಿ-ಬೀದರ ವಿಭಾಗದ ಅಧ್ಯಕ್ಷರಾದ ಚಂದ್ರಶೇಖರ ಪತ್ತಾರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ವಿಶ್ವಕರ್ಮರು ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಇನ್ನಷ್ಟು ಜಾಗೃತರಾಗಬೇಕೆಂದು ಹೇಳಿದರು.
ಸಮಾರಂಭದಲ್ಲಿ ಸಮಾಜದ ಹಿರಿಯರಾದ ಮಾನಯ್ಯ ಬಡಿಗೇರ್ (ಸ್ಥಪತಿಗಳು), ಸಾಹಿತಿ ನರಸಿಂಗರಾವ್ ಹೇಮನೂರ, ನೌಕರರ ಸಂಘದ ಅಧ್ಯಕ್ಷ ಗಂಗಾಧರ ಪೆÇೀದಾರ, ನಾಗಮೂರ್ತಿ ವಿಶ್ವಕರ್ಮ, ಬೀದರ್ ವಿಶ್ವಕರ್ಮ ಧರ್ಮವರ್ಧನಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಂಚಾಳ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಮಾಜದ ಬಾಂಧವರು ಹಾಜರಿದ್ದರು.

























