Home ಜಿಲ್ಲೆ ಬೆಂಗಳೂರು ಗೋಮಾಳ ಜಮೀನಿನಲ್ಲಿ ರಸ್ತೆ ನಿರ್ಮಿಸಿಕೊಟ್ಟರೆ ರೈತರಿಗೆ ಅನುವು

ಗೋಮಾಳ ಜಮೀನಿನಲ್ಲಿ ರಸ್ತೆ ನಿರ್ಮಿಸಿಕೊಟ್ಟರೆ ರೈತರಿಗೆ ಅನುವು

ಕೋಲಾರ,ಫೆ.೧೧: ತಾಲೂಕಿನ ಪಾರೇಹೊಸಹಳ್ಳಿ ಗ್ರಾಮದ ಹತ್ತಾರು ರೈತರ ಜಮೀನಿಗೆ ತೆರಳಲು ಸರ್ಕಾರಿ ಗೋಮಾಳ ಜಮೀನಿನಲ್ಲಿ ಕೇವಲ ಒಂದೇ ಒಂದು ಗುಂಟೆಯಲ್ಲಿ ರಸ್ತೆ ನಿರ್ಮಾಣ ಮಾಡಿದ್ರೆ ರೈತರಿಗೆ ಬಹಳ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ವಿಕಲಚೇತನ ಪಿಕೆ ಶಿವಣ್ಣ ಮನವಿ ಮಾಡುತ್ತಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ತಾನು ಸ್ವಾವಲಂಬಿ ಜೀವನ ನಡೆಸಬೇಕೆಂದು ತನ್ನ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿ ಬೃಹತ್ ಕೃಷಿಹೊಂಡ ತೆಗಿಸಿ ಟೊಮ್ಯಾಟೊ, ಹೂ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ನಡೆಸಲಾಗುತ್ತಿದೆ. ಆದರೆ ನಮ್ಮ ಜಮೀನುಗಳಿಗೆ ತೆರಳಲು ರಸ್ತೆ ಇಲ್ಲದ ಕಾರಣ ಬಾರಿ ತೊಂದರೆಯಾಗುತ್ತಿದೆ. ತನ್ನನ್ನು ಬೇರೆಯೊಬ್ಬರು ತೋಟದ ಬಳಿ ಎತ್ತಿಕೊಂಡು ಹೋಗಿ ಬಿಡಬೇಕಾಗಿದೆ. ಬೆಳೆದ ಹಣ್ಣು, ಕಾಯಿ ಹೂಗಳನ್ನ ತಲೆಯಮೇಲೆ ಎತ್ತಿಕೊಂಡು ಬೇರೆಡೆ ಸಾಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ತನ್ನದೆ ಸ್ವಂತ ೧೦ ಗುಂಟೆ ಜಮೀನಿನಲ್ಲಿ ರಸ್ತೆ ಬಿಟ್ಟುಕೊಟ್ಟಿದ್ದೇನೆ. ರಸ್ತೆ ಇಲ್ಲದ ಕಾರಣ ಕಳೆದ ವರ್ಷ ಬೆಳೆದ ಟೊಮ್ಯಾಟೊ ಗಿಡದಲ್ಲೇ ಬಿಟ್ಟ ಹಿನ್ನೆಲೆ ೧೦ ಲಕ್ಷ ಸಾಲ ಮಾಡಿದ್ದೇನೆ. ನಮ್ಮ ಜಮೀನಿಗೆ ಹೊಂದಿಕೊಂಡಂತೆ ಇರುವ ಗೋಮಾಳ ಜಮೀನಿನಲ್ಲಿ ಕೇವಲ ಒಂದು ಗುಂಟೆ ಜಮೀನು ಕೊಟ್ಟರೆ ಮುಖ್ಯ ರಸ್ತೆವರೆಗೆ ರಸ್ತೆ ನಿರ್ಮಾಣ ಮಾಡಬಹುದು. ಹತ್ತಾರು ರೈತರಿಗೆ ಬಹಳ ಅನುಕೂಲವಾಗುತ್ತದೆ ಎಂದರು.


ಪಾರೇಹೊಸಹಳ್ಳಿ ರೈv ಚಂದ್ರಶೇಖರ್ ಹೇಳಿಕೆ ನೀಡಿ, ಗಟ್ಟಿಮುಟ್ಟಾದ ಶರೀರ ಇದ್ದರೂ ಯುವಕರು ಕೃಷಿ ಕಡೆ ಕಣ್ಣು ಹಾಯಿಸಲ್ಲ. ಆದರೆ ಇಲ್ಲಿನ ವಿಶೇಷಚೇತನ ಪಿ.ಕೆ ಶಿವಣ್ಣ ಕೃಷಿ ಕಾಯಕದಲ್ಲಿ ತೊಡಗಿ ಮಾದರಿ ರೈತರಾಗಿ ಗಮನ ಸೆಳೆಯುತ್ತಿದ್ದಾರೆ. ಹುಟ್ಟಿದ ಕೆಲವು ವರ್ಷಗಳಲ್ಲಿ ಪೋಲಿಯೋ ಆಗಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ವಿಕಲಚೇತನರಾದರು. ಆದರೆ ಛಲಬಿಡದೆ ಕೃಷಿಯತ್ತ ಗಮನಹರಿಸಿ ಜೀವನದ ಬಂಡಿ ನಡೆಸುತ್ತಿದ್ದಾರೆ.


ಆದರೆ ಅವರ ಜಮೀನಿಗೆ ಹೋಗಲು ರಸ್ತೆ ಇಲ್ಲ ಕೂಲಿ ಕೆಲಸದವರನ್ನು ಇಟ್ಟುಕೊಂಡು ಹೂ, ಟೊಮ್ಯಾಟೊ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತೋಟದಲ್ಲಿ ಬೆಳೆದ ಹೂ ಹಣ್ಣು ಕಾಯಿಗಳನ್ನು ಸಾಗಿಸಲು ರಸ್ತೆ ಇಲ್ಲವಾಗಿದೆ. ಇವರು ಬೇರೆ ರೈತರಿಗೆ ಅನುಕೂಲವಾಗಲಿ ಎಂದು ತಮ್ಮ ಸ್ವಂತ ಜಮೀನಿನಲ್ಲಿ ೧೦ ಗುಂಟೆ ಜಾಗ ಬಿಟ್ಟಿದ್ದಾರೆ. ಆದರೆ ಇವರ ಜಮೀನಿಗೆ ರಸ್ತೆ ಇಲ್ಲವಾಗಿದೆ. ಸರ್ವೆ ನಂ.೧೬೫ರಲ್ಲಿ ಸರ್ಕಾರಿ ಗೋಮಾಳ ಜಮೀನು ೨೫ ಎಕರೆ ಇದ್ದು ಅದರಲ್ಲಿ ಕೇವಲ ಒಂದು ಗುಂಟೆ ಜಾಗ ಬಿಟ್ಟುಕೊಟ್ಟರೆ ಮುಖ್ಯ ರಸ್ತೆ ವರೆಗೆ ರಸ್ತೆ ನಿರ್ಮಾಣ ಮಾಡಬಹುದು ಎಂದು ಮನವಿ ಮಾಡಿದ್ದಾರೆ