ಹಳ್ಳಿಗಳಲ್ಲಿ ಗ್ರಂಥಾಲಯ ತೆರೆದರೆ ಮನೆಗೊಬ್ಬ ಅಂಬೇಡ್ಕರ್ ಜನಿಸುತ್ತಾರೆ: ಭಾರತಿ

ಚೇಳೂರು, ಮೇ ೨೨- ಪ್ರತಿಯೊಂದು ಗ್ರಾಮದಲ್ಲೂ ಗ್ರಂಥಾಲಯಗಳನ್ನು ತೆರೆದಾಗ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತದೆ, ಮನೆಗೊಬ್ಬ ಅಂಬೇಡ್ಕರ್ ಹುಟ್ಟುತ್ತಾರೆ ಎಂದು ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಹೇಳಿದರು.


ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಕೊಡಿಯಾಲ ಗ್ರಾಮದಲ್ಲಿ ಹಮ್ಮಿಕೊoಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ಡಾ. ಬಾಬು ಜಗಜೀವನ್ ರಾಮ್ ನಾಮ ಫಲಕದ ಉದ್ಘಾಟನೆ ಮಾಡಿ ಅವರು ಮಾತನಾಡಿದರು.


ಗ್ರಾಮೀಣ ಪ್ರದೇಶದಲ್ಲಿ ಶೋಷಿತ ಸಮುದಾಯಗಳು ಮೌಢ್ಯತೆಯಿಂದ ಹೊರ ಬಂದು ದೇವಾಲಯಗಳನ್ನು ಕಟ್ಟುವ ಬದಲು ಗ್ರಂಥಾಲಯಗಳನ್ನು ಸ್ಥಾಪನೆ ಮಾಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರೆ ಹೊಸ ಸಮಾಜ ನಿರ್ಮಾಣವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದರಿಂದ ಹೊರಬಂದು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಶಿಕ್ಷಣದಿಂದ ಸದೃಢ ಗ್ರಾಮ ಹಾಗೂ ಸದೃಢ ರಾಷ್ಟ್ರ ಹಾಗೂ ಸಮಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.


ಡಿಎಸ್‌ಎಸ್ ಮುಖಂಡ ಚೇಳೂರು ಶಿವನಂಜಪ್ಪ ಮಾತನಾಡಿ, ಶಾಸಕ ಶ್ರೀನಿವಾಸ್ ಮತ್ತು ಅವರ ಧರ್ಮ ಪತ್ನಿ ಇಂದಿಗೂ ದಲಿತರನ್ನು ನಮ್ಮ ಮನೆ ಮಕ್ಕಳಂತೆ ಕಾಣುತ್ತಾರೆ. ದಲಿತರು ಅವರ ಮನೆ ಬಾಗಿಲಿಗೆ ಹೋದರೆ ಊಟ ಮಾಡಿಸದೆ ಕಳುಹಿಸುವುದಿಲ್ಲ, ಶಾಸಕರ ಕುಟುಂಬ ದಲಿತರ ಮೇಲೆ ಇಟ್ಟಿರುವ ಕಾಳಜಿ ತುಂಬಾ ಗೌರವನ್ವಿತ ಎಂದರು.


ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ದಲಿತ ಮುಖಂಡ ಕೊಡಿಯಾಲ ಮಾದೇವ, ಕೀರ್ತಿರಾಜ್, ಬಸವರಾಜು, ಮುಖಂಡರಾದ ಅರೇಹಳ್ಳಿ ಮಂಜುನಾಥ್, ಪದ್ಮ, ಪಾಂಡು, ರಾಮಕೃಷ್ಣಯ್ಯ, ರಮೇಶ್, ನರಸಿಂಹಮೂರ್ತಿ ನಿರಂಜನಮೂರ್ತಿ ಮತ್ತಿತರರು ಭಾಗವಹಿಸಿದ್ದರು.