ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ; ಪ್ರಿಯಾಂಕ್ ಖರ್ಗೆ

ಚಿತ್ತಾಪುರ;ಜ.26: ಪತ್ರಕರ್ತರು ಅಪ್ರಾಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಠಿಯಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಹಿರಿಯ ಪತ್ರಕರ್ತ ದಿ. ನಾಗಯ್ಯಸ್ವಾಮಿ ಅಲ್ಲೂರ್ ಅವರ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಾಗಾವಿ ನಕ್ಷತ್ರ ಸಂಸ್ಮರಣ ಗ್ರಂಥ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಾಗಯ್ಯ ಸ್ವಾಮಿ ಅಲ್ಲೂರ್ ಅವರು ಅತ್ಯಂತ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಪ್ರಾಮಾಣಿಕತೆಯನ್ನು ಅವರು ಮೈಗೂಡಿಸಿಕೊಂಡಿದ್ದರು. ಅಂತಹ ಪ್ರಾಮಾಣಿಕತೆ ಅವರನ್ನು ಕೇವಲ ಪತ್ರಿಕಾರಂಗಕ್ಕೆ ಮಾತ್ರ ಸೀಮಿತಗೊಳಿಸದೆ, ಸಾಂಸ್ಕøತಿಕ, ಸಾಹಿತ್ಯ ಲೋಕದ ಒಬ್ಬ ನಿಷ್ಠಾವಂತ ಬರಹಗಾರರನ್ನಾಗಿ ರೂಪಿಸಿದೆ. ಜನರಿಗಾಗಿ ಹಾಗೂ ಮಕ್ಕಳಿಗಾಗಿ ಅವರು ನೀಡಿದ ಸಮಾಜ ಸೇವೆ ಅವರನ್ನು ಸಮಾಜಮುಖಿ ಚಿಂತಕ ಹಾಗೂ ಶಿಕ್ಷಣ ಪ್ರೇಮಿಯನ್ನಾಗಿ ರೂಪಿಸಿವೆ ಎಂದರು.
ಪತ್ರಕರ್ತರು ಅಪ್ರಮಾಣಿಕರಾದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಅಭಿಪ್ರಾಯ ಪಟ್ಟ ಸಚಿವರು ನಾಗಯ್ಯಸ್ವಾಮಿಯಂತ ಪತ್ರಕರ್ತರು ಸಮಾಜದ ಎಲ್ಲ ವರ್ಗದವರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಅವರು ನಮ್ಮೊಂದಿಗೆ ಈಗ ಇಲ್ಲ. ಅವರ ಗೆಳೆಯರ ಬಳಗ ಅವರ ಬಗೆಗಿನ ಪುಸ್ತಕಕ್ಕೆ ನಾಗಾವಿ ನಕ್ಷತ್ರ ಎಂದು ಹೆಸರಿಟ್ಟಿದ್ದಾರೆ. ನಾಗಯ್ಯಸ್ವಾಮಿ ನಿಜ ಅರ್ಥದಲ್ಲಿ ನಕ್ಷತ್ರವಾಗಿದ್ದಾರೆ ಅವರನ್ನು ಅನುಸರಿಸಿದರು ಹೊಳೆಯುತ್ತಾರೆ ಎಂದು ಸಚಿವರು ಕೊಂಡಾಡಿದರು.
ಚಿತ್ತಾಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳದ ಸಂದರ್ಭವನ್ನು ಮೆಲುಕು ಹಾಕಿದ ಸಚಿವರು ಆ ಸಂದರ್ಭದಲ್ಲಿ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದರು. ಸಮ್ಮೇಳನದ ಖರ್ಚು ವೆಚ್ಚಗಳ ಬಗ್ಗೆ ಪ್ರತಿಯೊಂದು ವಿವರವನ್ನು ನನಗೆ ಒದಗಿಸಿದ್ದರು. ಅಂತಹ ನಿಷ್ಠೆ ಹಾಗೂ ಪ್ರಾಮಾಣಿಕತೆ ಅವರಲ್ಲಿತ್ತು ಎಂದರು.
ನಾಗಯ್ಯಸ್ವಾಮಿ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಅವರು ವೇದಿಕೆಯ ಮೇಲಿದ್ದ ಅವರ ಕುಟುಂಬ ವರ್ಗದವರಿಗೆ ಧೈರ್ಯ ತುಂಬಿ, ಕೇವಲ ಅವರ ಸ್ನೇಹಿತರು ಮಾತ್ರವಲ್ಲದೇ ನಾನು ಕೂಡಾ ವೈಯಕ್ತಿಕ ಸಹಾಯ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅವರ ಸ್ನೇಹಿತ ವಲಯದಲ್ಲಿ ಸಂಗ್ರಹಿಸಲಾದ 1.90 ಲಕ್ಷ ರೂ. ಮೊತ್ತದ ಚೆಕ್’ನ್ನು ಸಚಿವರು ಅವರ ಕುಟುಂಬದವರಿಗೆ ವಿತರಿಸಿದರು.
ಹಲಕರ್ಟಿ ಕಟ್ಟಿಮನಿ ಮಠದ ಮುನೀಂದ್ರ ಶಿವಾಚಾರ್ಯ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಮಾತನಾಡಿದರು.
ಸಂಸ್ಮರಣ ಗ್ರಂಥದ ಪ್ರಧಾನ ಸಂಪಾದಕ ಲಿಂಗಪ್ಪ ಮಲ್ಕನ್ ಪ್ರಾಸ್ತಾವಿಕ ಮಾತನಾಡಿದರು.
ಪತ್ರಕರ್ತರ ಸಂಘದ ಜಿಲ್ಲಾ ಮಾಜಿ ಕಾರ್ಯದರ್ಶಿ ವೀರೇಂದ್ರ ಕೊಲ್ಲೂರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಲಿಂಗಾರೆಡ್ಡಿ ಬಾಸರೆಡ್ಡಿ, ಭವಾನಿ ಸಿಂಗ್ ಠಾಕೋರ್, ಮಹೇಮೂದ್ ಸಾಹೇಬ್, ಶಿವಾನಂದ ಪಾಟೀಲ ಮರ್ತೂರ್, ಭೀಮಣ್ಣ ಸಾಲಿ, ಚಂದ್ರಶೇಖರ ಆವಂಟಿ, ಶಂಕರಗೌಡ ಪಾಟೀಲ್, ಬಸವರಾಜ ಬಳೂಂಡಗಿ, ವೀರಭದ್ರಪ್ಪ ಗುರುಮಿಟಕಲ್, ಸಿದ್ಧಮ್ಮ, ಶಿವಾನಂದ ನಾಲವಾರ, ದೇವಪ್ಪ ನಂದೂರಕರ್, ಕಾಶಿರಾಯ ಕಲಾಲ್, ನಟರಾಜ ಶಿಲ್ಪಿ ಸೇರಿದಂತೆ ಅನೇಕ ಮುಖಂಡರು, ಪತ್ರಕರ್ತರು, ಅಭಿಮಾನಿಗಳು ಹಾಗೂ ಗೆಳೆಯ ಬಳಗದವರು ಇದ್ದರು.
ರಾಚಯ್ಯ ಸ್ವಾಮಿ ಸ್ವಾಗತಿಸಿದರು. ನರಸಪ್ಪ ಚಿನ್ನಾಕಟ್ಟಿ ನಿರೂಪಿಸಿ, ವಂದಿಸಿದರು.