
ಕೋಲಾರ,ಜ,೧೨- ಆಡಳಿತ ಮತ್ತು ಸುಧಾರಣೆಯ ಇಲಾಖೆಯು ಅರಣ್ಯ ರಕ್ಷಣೆ ಹೆಸರಿನಲ್ಲಿ ರೈತರಿಗೆ ತೊಂದರೆ ನೀಡುತ್ತಿರುವುದು ಸiಂಜಸವಲ್ಲ ಕೊಡಲೇ ರೈತರನ್ನು ಒಕ್ಕಲೆಬ್ಬಿಸುವುದನ್ನು ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಕೈ ಕಟ್ಟಿ ಕೊಂಡು ಕಣ್ಣು ಮುಚ್ಚಿ ಕೊಂಡಿರಲು ಸಾಧ್ಯವಿಲ್ಲ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಎಚ್ಚರಿಸಿದರು.
ಬೆಂಗಳೂರಿನ ಶಾಸಕರ ಭವನದಲ್ಲಿ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ನೇತ್ರತ್ವದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಜಿಸಿದ್ದ ಸಂವಾದ ಸಭೆಯಲ್ಲಿ ಕಾನೂನು ಬದ್ದವಾಗಿ ಭೂಮಿಯ ಹಕ್ಕನ್ನು ಪಡೆದು ಕೊಂಡಿದ್ದ ರೈತರಿಂದ ಕಳೆದ ೪ ವರ್ಷಗಳಿಂದ ದೌರ್ಜನ್ಯದಿಂದ ರೈತರನ್ನು ಒಕ್ಕಲೆಬ್ಬಿಸು ಮೂಲಕ ತೊಂದರೆ ನೀಡುತ್ತಿರುವ ವಿಷಯವಾಗಿ ಅವರು ಮಾತನಾಡಿ ಭೂಮಿಯ ಒಡೆತನ ರಾಜ್ಯ ಸರ್ಕಾರಕ್ಕೆ ಸೇರಿದ್ದು, ಕಾಲದಿಂದ ಕಾಲಕ್ಕೆ ವಿವೇಚನಾ ದೃಷ್ಠಿಯಿಂದ ಭೂಮಿಯನ್ನು ರೈತರಿಗೆ ಮತ್ತು ಇತರೆ ಅಭಿವೃದ್ದಿಯ ಭಾಗವಾಗಿ ಹಂಚಿಕೆ ಮಾಡಲಾಗುತ್ತದೆ. ಹಂಚಿಕೆಯಲ್ಲಿ ಅರಣ್ಯ ಇಲಾಖೆಯು ಸಹ ಒಂದಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಗೆ ಹಂಚಿಕೆಯಾದ ಭೂಮಿ ನೂರಾರು ವರ್ಷಗಳ ಕಾಲ ಯಾಕೆ ಮ್ಯೂಟೇಷನ್ ಮಾಡಿರಲಿಲ್ಲ. ಮೊದಲ ನೋಟಿಫೀಕೇಷನ್ ಆದಾ ನಂತರ ಅದರಲ್ಲಿ ಎಷ್ಟು ಸರ್ವೆ ನಂಬರ್‌ಗಳಿದೆ. ಎಷ್ಟು ಭೂಮಿಯ ವಿಸ್ತೀರ್ಣವಿದೆ ಇದರಲ್ಲಿ ಏನೆಲ್ಲಾ ಇದೆ. ಫಲಾನುಭವಿಗಳೆಷ್ಟು ಎಂಬೆಲ್ಲಾ ವಿವರಗಳಿಗಾಗಿ ಫಾರೆಸ್ಟ್ ಸೆಟಲ್ಮೇಂಟ್ ಆಫೀಸರ್ ನೇಮಕ ಮಾಡಿ ಅವರ ಶಿಫಾರಸ್ಸಿನ ಮೇರೆಗೆ ಬಿ ಮತ್ತು ಸಿ ಸೆಟಲ್ಮೇಂಟ್ ಆಗಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟರು.
ನೂರಾರು ವರ್ಷಗಳಿಂದ ಈ ಪ್ರಕ್ರಿಯೆಗಳನ್ನು ನಿರ್ಲಕ್ಷಿಸಿದ್ದ ಅರಣ್ಯ ಇಲಾಖೆಯವರು ಕಂದಾಯ ಮತ್ತು ಅರಣ್ಯ ಇಲಾಖೆಯ ಮೂಲ ನಕಾಶೆಗಳನ್ನು ಬದಿಗಿಟ್ಟು ವರ್ಕ್ ಪ್ಲಾನ್ ನಕಾಶೆಗಳ ಆಧಾರದಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವುದನ್ನು ನೋಡಿ ಕೊಂಡು ಜನಪ್ರತಿನಿಧಿಗಳಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವಂತ ಸುಮ್ಮನಿರಲು ಸಾಧ್ಯವಿಲ್ಲ ಎಂದು ಘೋಷಿಸಿದರು.
ಸ್ವಾತಂತ್ರ್ಯಕ್ಕೆ ಮೊದಲು ಭೂಮಿ ಹಂಚಿಕೆ. ಸ್ವಾತಂತ್ರ್ಯದ ನಂತರ ಭೂ ಮಂಜೂರಾತಿ ಮೂಲಕ ರೈತರಿಗೆ ಭೂಮಿ ಸಿಕ್ಕಿದೆ. ೧೯೭೨ರ ತನಕ ಲ್ಯಾಂಡ್ ಗ್ರಾಂಡ್ ಕಮಿಟಿಗಳು ಕಾನೂನು ಬದ್ದವಾಗಿರಲಿಲ್ಲ. ೧೯೭೪ರ ಭೂ ಸುಧಾರಣೆ ಕಾಯ್ದೆ ಪರಿಣಾಮಕಾರಿಯಾದ ತೀರ್ಮಾನಗಳಂತೆ ಯಾರು ಭೂಮಿಯನ್ನು ಉಳುವವ ಮೂಲಕ ಸ್ವಾಧೀನದಲ್ಲಿರುತ್ತದೆಯೋ ಅವರಿಗೆ ಭೂಮಿಯ ಒಡೆತನ ಸಿಕ್ಕಿತ್ತು ಎಂಬುವುದನ್ನು ನೆನಪಿಸಿದರು.
ಅರಣ್ಯ ಇಲಾಖೆಯವರು ತಮಗೆ ನೀಡಿರುವ ಅರಣ್ಯ ಭೂಮಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ ಪರಿಸರ ಅಭಿವೃದ್ದಿ ಪಡೆಸುವ ಬದಲಾಗಿ ಸರ್ವೆ ಮತ್ತು ಕಂದಾಯ ಇಲಾಖೆಯ ಕೆಲಸಗಳನ್ನು ಕೈಗೆತ್ತಿ ಕೊಂಡಿದ್ದಾರೆ. ಶಾಸನ ಬದ್ದವಾಗಿ ಭೂಮಿ ಮಂಜೂರು ಮಾಡಿದ್ದ ಅಧಿಕಾರಿಗಳು ರೈತರಿಗೆ ರಕ್ಷಣೆ ನೀಡಬೇಕಾಗಿತ್ತು. ಅದರೆ ಇವತ್ತಿನ ಪರಿಸ್ಥಿತಿಯಲ್ಲಿ ಕಂದಾಯಾಧಿಕಾರಿಗಳು ಮತ್ತು ಪೊಲೀಸರು ಸಹ ಅರಣ್ಯ ಇಲಾಕೆಯವರ ನೆರವಿಗೆ ನಿಂತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ವ್ಯಂಗವಾಡಿದರು.
ಅರಣ್ಯ ಇಲಾಖೆ ಮುಂದೆ ನಾವು ಭಿಕ್ಷೆ ಬೇಡ ಬೇಕಾಗಿಲ್ಲ. ರೈತರು ಎಂದಿಗೂ ಭಿಕ್ಷಕರಲ್ಲ ಭೂಮಿಗೆ ತಮ್ಮ ಬೆವರು ಸುರಿಸಿ ನಮಗೆ ಅನ್ನ ನೀಡುವಂತ ಅನ್ನದಾತರು ರೈತರ ಪರವಾಗಿ ಪ್ರತಿಯೊಬ್ಬರು ಹೋರಾಟವನ್ನು ಕೈಗೆತ್ತಿ ಕೊಳ್ಳ ಬೇಕೆಂದು ಕರೆ ನೀಡಿದ ಅವರು ಇಂದಿನ ವ್ಯವಸ್ಥೆಗಳು ಹಾಳಾಗಿ ಎಕ್ಕೊಟ್ಟೊಗ್ಗಿದೆ.ನಾವು ರಾಜಕೀಯ ಭ್ರಮೆಯಿಂದ ಹೊರ ಬರಬೇಕೆಂದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಮುಳಬಾಗಿಲು ರೈತ ಮುಖಂಡ ಎಂ.ಗೋಪಾಲ್,ಶ್ರೀರಾಮ್, ರೈತ ಸಂಘದ ಪಿ.ಆರ್. ಸೂರ್ಯನಾರಾಯಣ್ . ಕೆ.ಪಿ.ಆರ್.ಎಸ್. ವೆಂಕಟೇಶ್ ಟಿ.ಎಂ. ಪಾಪೇಗೌಡ, ಹರಟಿ ಪ್ರಕಾಶ್ ಪಾತಕೋಟೆ ನವೀನ್ ಕುಮಾರ್. ಆನೇಕಲ್ ನಾಗರಾಜ್ ಶಿಳ್ಳೆಂಗೆರೆ ಶ್ರೀನಿವಾಸನ್, ಕೇತಗಾನಹಳ್ಳಿ ನಾಗರಾಜ್, ಗೋಪಾಲಕೃಷ್ಣ, ಬಿ.ಎಂ. ಪ್ರಕಾಶ್. ಸಿ. ಮುನಿವೆಂಕಟಪ್ಪ, ದರ್ಶನ್ ಮುಂತಾದವರು ಭಾಗವಹಿಸಿದ್ದರು.



























