
ಕಲಬುರಗಿ,ಮೇ.14: ಕಳೆದ ಮೂರು ವರ್ಷಗಳ ಕಾಲ ಕಲಬುರಗಿಯಲ್ಲಿ ಸಲ್ಲಿಸಿದ ಸೇವೆ ತಮಗೆ ತೃಪ್ತಿ ನೀಡಿದೆ. ನನ್ನನ್ನು ಉತ್ತಮ ಅಧಿಕಾರಿಯನ್ನಾಗಿ ರೂಪಿಸಿದ ಕಲಬುರಗಿ ಜಿಲ್ಲೆಗೆ ಚಿರರುಣಿಯಾಗಿದ್ದೇನೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಅಭಿಪ್ರಾಯಪಟ್ಟರು.
ಬುಧವಾರ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಕಚೇರಿ ಸಿಬ್ಬಂದಿಗಳಿಂದ ಆಯೋಜಿಸಿದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಕಾಯಕ ತತ್ವವನ್ನು ಅಕ್ಷರಸ ಪಾಲಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ. ಇದಕ್ಕಾಗಿ ಸಹಕಾರ ನೀಡಿದ ಜಿಲ್ಲೆಯ ಜನಪ್ರತಿನಿಧಿಗಳು, ಆಡಳಿತ ವರ್ಗ, ಕಚೇರಿ ಸಿಬ್ಬಂದಿ, ಸಂಘ,-ಸಂಸ್ಥೆಗಳು, ಮಾಧ್ಯಮದವರು, ಸಾರ್ವಜನಿಕರಿಗೆ ಧನ್ಯವಾದ ತಿಳಿಸಲು ಇಚ್ಛೆಪಡುತ್ತೇನೆ ಎಂದರು.
ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ವಿವಿಧ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆ ಕೆಳಗಿನಿಂದ ನೋಡಲಾಗುತ್ತಿತ್ತು. ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಕೆಲಸ ನಿರ್ವಹಿಸಿದ ಪರಿಣಾಮ ಇಂದು ಸಕಾಲ್, ನಾಡ ಕಚೇರಿ ಅರ್ಜಿ ವಿಲೇವಾರಿಯಲ್ಲಿ ಟಾಪ್ -5 ರಲ್ಲಿ ಕಲಬುರಗಿ ಜಿಲ್ಲೆ ಕಾಣಬಹುದಾಗಿದೆ. ಪ್ರತಿಯೊಂದು ಇಲಾಖೆಯಲ್ಲಿ ಕೈಲಾದಷ್ಟು ಕೆಲಸ ಮಾಡಿದ ಆತ್ಮ ತೃಪ್ತಿ ಇದೆ. ಉತ್ತಮ ಕಾರ್ಯನಿರ್ವಹಣೆಗೆ ನೀತಿ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ. ದಾಖಲೆ ಪ್ರಮಾಣದಲ್ಲಿ ಜಿಲ್ಲೆಯ ಅನ್ನದಾತ ರೈತರಿಗೆ 2,591 ಕೋಟಿ ರೂ. ಬೆಳೆ ವಿಮೆ, ಬರ ಪರಿಹಾರ ಬಿಡುಗಡೆ ಮಾಡಿದ್ದು ಮರೆಯಲಾಗದುಬಎಂದರು.
ಜಿಲ್ಲೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ ಅಡ್ಡೂರು ಶ್ರೀನಿವಾಸುಲು ಅವರ ತುಂಬಾ ಸಹಕಾರ ನೀಡಿದ್ದಾರೆ. ಇದರಿಂದ ಅನೇಕ ಸವಾಲನ್ನು ನಾವು ಸಮರ್ಥವಾಗಿ ಎದುರಿಸಲು ಸಾಧ್ಯವಾಯಿತು. ಸಿ.ಇ.ಓ ಭಂವರ್ ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್ ಸುಮಿತ್ ಪಾಟೀಲ ಅದಿಯಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ತಮ್ಮ ಕಚೇರಿಯ ಸಿಬ್ಬಂದಿಗಳು ದೈನಂದಿನ ಆಡಳಿತದಲ್ಲಿ ಮತ್ತು ಜಿಲ್ಲೆಯ ಪ್ರಗತಿಗೆ ಸಹಕಾರ ಸರ್ವರನ್ನು ನೆನೆದ ಬಿ. ಫೌಜಿಯಾ ತರನ್ನುಮ್ ಅವರು, ಇದೇ ರೀತಿಯ ಸಹಕಾರ ನೂತನ ಜಿಲ್ಲಾಧಿಕಾರಿಗಳಿಗೂ ನೀಡಬೇಕೆಂದು ಮನವಿ ಮಾಡಿಕೊಂಡರು.
ಕಲಬುರಗಿ ರೊಟ್ಟಿಗೆ ಬ್ರ್ಯಾಂಡ್ ನೀಡಿದ ಪರಿಣಾಮ ರೊಟ್ಟಿ ವಿದೇಶ ಮಾರಾಟಕ್ಕೆ ಲಗ್ಗೆ ಇಟ್ಟಿದ್ದು, ಇಲ್ಲಿನ ಅನೇಕ ಬಡ ಮಹಿಳೆಯರು ಸ್ವಯಂ ಉದ್ಯೋಗಕ್ಕೆ ಅವರ ಸಬಲೀಕರಣಕ್ಕೆ ಕಾರಣವಾಗಿದೆ. ಕೆಸರಟಗಿಯಲ್ಲಿ ಸುಮಾರು 320 ಬಡವರಿಗೆ ಮನೆ ಹಂಚಿಕೆ ಮಾಡಿದ್ದೇವೆ. ಡಬರಾಬಾದನಲ್ಲಿಯೂ ಮನೆ ಹಂಚಿಕೆಗೆ ಸಿದ್ಧವಾಗಿವೆ. ಕಲಬುರಗಿ ಮೃಗಾಲಯ ಉದ್ಘಾನಟೆಗೆ ಸಿದ್ಧಗೊಂಡಿದೆ ಎಂದು ತಮ್ಮ ಅವಧಿಯಲ್ಲಿ ಕೆಲಸಕಾರ್ಯಗಳನ್ನು ನೆನೆಸಿಕೊಂಡ ಅವರು, ಒಟ್ಟಿನಲ್ಲಿ ಕಲಬುರಗಿಯಲ್ಲಿ ಕೆಲಸ ನಿರ್ವಹಿಸಲು ಅವಕಾದ ಸಿಕ್ಕಿದಕ್ಕೆ ನಾನೇ ಲಕ್ಕಿ ಎಂದರು.
ಜನಸ್ನೇಹಿ ಆಡಳಿತಕ್ಕೆ ಸಹಕರಿಸಿ:ನೂತನ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಮಾತನಾಡಿ, ಜಿಲ್ಲಾಡಳಿತ ಮತ್ತು ಸರ್ಕಾರದ ಮೇಲೆ ಜನರ ಅಶೋತ್ತರಗಳು ಬೆಟ್ಡದಷ್ಟಿವೆ. ಅವುಗಳನ್ನು ಪ್ರಮಾಣಿಕವಾಗಿ ಈಡೇರಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ 3 ವರ್ಷ ಕಾಲ ಬಿ.ಫೌಜಿಯಾ ತರನ್ನುಮ್ ಅವರು ಜಿಲ್ಲಾಧಿಕಾರಿಯಾಗಿ ಜಿಲ್ಲೆಯಲ್ಲಿ ಅನೇಕ ಜನಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಅಭಿವೃದ್ಧಿಶೀಲ ಜಿಲ್ಲೆಯನ್ನಾಗಿಸಲು ಬಹಳಷ್ಟು ಪ್ರಯತ್ನಗಳಾಗಿವೆ. ಈ ಅಭಿವೃದ್ಧಿಯ ರಥವನ್ನು ಹೀಗೆ ಮುಂದುವರೆಸಲು ನಿಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಅಧಿಕಾರಿ ವರ್ಗದಲ್ಲಿ ಮನವಿ ಮಾಡಿಕೊಂಡ ಅವರು, ನಾವೆಲ್ಲರು ಸೇರಿ ಜಿಲ್ಲೆಯ ಜನತೆಗೆ ಜನಸ್ನೇಹಿ ಮತ್ತು ಮಾದರಿ ಆಡಳಿತ ನೀಡೋಣ ಎಂದು ಕರೆ ನೀಡಿದರು.
ನಂತರ ನಿರ್ಗಮಿತ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಅವರೊಂದಿಗೆ ಆಗಮಿಸಿ ಅವರ ತಂದೆ-ತಾಯಿಯವರಿಗೆ ಕಚೇರಿ ಸಿಬ್ಬಂದಿಗಳಿಂದ ಫಲ ತಾಂಬೂಲ ಮತ್ತು ಸ್ಮರಣಿಕೆ ನೀಡಿ ಅತ್ನೀಯವಾಗಿ ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿ ಇಕ್ರಮ ಶರೀಫ್ ಅವರಿಗೆ ಹೂಗುಚ್ಚ ನೀಡಿ ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತ ಕೋರಲಾಯಿತು. ಇದಾದ ಬಳಿಕ ವಿವಿಧ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ನಿರ್ಗಮಿತ ಮತ್ತು ನೂತನ ಡಿ.ಸಿ.ಗಳಿಗೆ ಸನ್ಮಾನಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ವμರ್Á ರಾಜೀವ ಜಾನೆ, ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಅಯುಕ್ತ ಅವಿನಾಶ ಶಿಂಧೆ, ಡಿ.ಸಿ.ಎಫ್. ಸುಮಿತ್ ಪಾಟೀಲ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ಪಾಲಿಕೆಯ ಅಭಿವೃದ್ಧಿ ವಿಭಾಗದ ಉಪ ಆಯುಕ್ತೆ ಪ್ರಮೀಳಾ ಎಂ.ಕೆ., ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಜಿಲ್ಲೆಯ ತಹಶೀಲ್ದಾರರು, ಅನೇಕ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿ.ಸಿ ಕಚೇರಿ ಮತ್ತು ಆಪ್ತ ಶಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸ್ವಾಗತಿಸಿದರು. ವಾಣಿ ನಿರೂಪಿಸಿದರು. ತದನಂತರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರನ್ನು ತೆರೆದ ಕಾರಿನಲ್ಲಿ ಕಾ ಮೆರವಣಿಗೆ ಮೂಲಕ ರಂಗಂದಿರದಿಂದ ಮನೆಯವರಿಗೆ ಬೀಳ್ಕೊಡಲಾಯಿತು.
ಅಧಿಕಾರಿಗಳು ಅಭಿಪ್ರಾಯಗಳು:ಪ್ರಜಾ ಸೌಧ ಮಂಜೂರು, ಸಚಿವ ಸಂಪುಟ ಸಭೆ ಯಶಸ್ವಿ ಆಯೋಜನೆ, ಸಕಾಲ ನಂಬರ್-1, ಎ.ಜೆ.ಎಸ್.ಕೆ ನಂಬರ್-1, ಕಂದಾಯ ನ್ಯಾಯಾಲಯದಲ್ಲಿ 90 ದಿನಕ್ಕಿಂತ ಬಾಕಿ ಇಲ್ಲ. ಭೂ ಸುರಕ್ಷಾ ಡಿಜಟಲೀಕರಣ ಕಾರ್ಯ ರಾಜ್ಯದಲ್ಲಿ ಮೊದಲು ಇಲ್ಲಿ ಪೂರ್ಣಗೊಳಿಸಲಾಗಿದೆ. 364 ಕಂದಾಯ ಗ್ರಾಮ ಘೋಷಿಸಿ, 9 ಸಾವಿರ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಕಲಬುರಗಿ ರೊಟ್ಟಿ ಬ್ರ್ಯಾಂಡ್ ಕಲ್ಪಿಸಿದ್ದು, ಇದೆಲ್ಲವು ಬಿ.ಫೌಜಿಯಾ ತರನ್ನುಮ್ ಅವರ ಅವಧಿಯಲ್ಲಾಗಿರುವ ಕೆಲಸಗಳು ಎಂದು ಅವರೊಂದಿಗೆ ವೃತ್ತಿ ಬದುಕಿಮನ ಒಡನಾಟವನ್ನು ಹಂಚಿಕೊಂಡರು.
ನೂತನ ಡಿ.ಸಿ. ಇಕ್ರಮ್ ಶರೀಫ್ ಅವರೊಂದಿಗೆ ಈ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಅವರು ಸಹ ಜನಪರ ಆಡಳಿತ ನೀಡುವ ಅಧಿಕಾರಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಮುಂದೆಯೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು-ರಾಯಪ್ಪ ಹುಣಸಗಿ,ಅಪರ ಜಿಲ್ಲಾಧಿಕಾರಿಗಳು
ಡಿ.ಸಿ ಬಿ.ಫೌಜಿಯಾ ತರನ್ನುಮ್ ಅವರು ಕಲ್ಯಾಣ ನಾಡಿನಲ್ಲಿ ಉತ್ತಮ ಸೇವೆ ಸಲ್ಲಿಸಿರುವುದಕ್ಕೆ ಇಂದಿಲ್ಲಿ ಅವರಿಗೆ ಬೀಳ್ಕೊಡಕ್ಕೆ ಸೇರಿರುವ ಅಧಿಕಾರಿ ಸಮೂಹ, ಸಾರ್ವಜನಿಕರೆ ಸಾಕ್ಷಿಯಾಗಿದ್ದಾರೆ–ಸಂಗಣಗೌಡ,ಅಬಕಾರಿ ಉಪ ಅಯುಕ್ತ
ಕಾಯಕವೇ ಕೈಲಾಸ ಎಂಬುದನ್ನು ಡಿ.ಸಿ. ಮೇಡಂ ಅವರಿಂದ ಕಲಿತಿದ್ದೇವೆ. ಪ್ರತಿಯೊಂದು ಕಡತವು ಬರೀ ಕಡತವಾಗಿರಲ್ಲ ಅದರಲ್ಲದ ಅರ್ಜಿದಾರನ ಜೀವನವೇ ಅಡಗಿರುತ್ತದೆ, ಅದನ್ನು ನೋಡಿಕೊಂಡು ಕಡತ ವಿಲೇವಾರಿ ಮಾಡಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಕಲಬುರಗಿಯಲ್ಲಿ ಕಾರ್ಮಿಕರಿಗೆ ಆಶ್ರಯ ತಂಗುದಾಣ ಇಲ್ಲಿ ನಿರ್ಮಿಸಿದ್ದು ರಾಜ್ಯಕ್ಕೆ ಮಾದರಿಯಾಗಿದೆ–ಶರಣಪ್ಪ ಹಳಿಮನಿ,ಜಿಲ್ಲಾ ಕಾರ್ಮಿಕ ಅಧಿಕಾರಿ
ಡಿ.ಸಿ. ಮೇಡಂ ಕಾರ್ಯಶೈಲಿಯಲ್ಲಿ ಅರಂಭದಿಂದ ಇಂದಿನ ವರೆಗೂ ಎಂದಿಗೂ ಬದಲಾವಣೆ ಕಂಡಿಲ್ಲ. ಹಿಂದೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾಗ ಇದೀಗ ಮೂರು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿರುವ ಕಟರಣಿಭೂತರಾಗಿದ್ದಾರೆ.. ಒಟ್ಟಾರೆಯಾಗಿ ಡಿ.ಸಿ.ಮೇಡಂ ಅವರು ತಾಯಿ ಹೃದಯದವರು, ಎಲ್ಲರನ್ನು ತೆಗೆದುಕೊಂಡು ಹೋಗುವಂತಹ ಕೆಲಸ ಮಾಡಿದ್ದಾರೆ–ಕೆ.ಆನಂದಶೀಲ,ಕಲಬುರಗಿ ತಹಶೀಲ್ದಾರ.
ಬಿ.ಫೌಜಿಯಾ ತರನ್ನುಮ್ ಮೇಡಂ ಅವರು ತಾಯಿ ಹೃದಯವುಳ್ಳವರು. ಆಳಂದ ಪಟ್ಟಣದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಬಾಲಕಿಯೊಬ್ಬಳು ಮರಣಹೊಂದ ನಂತರ ಡಿ.ಸಿ. ಮೇಡಂ ಅವರು, ಗುಡ್ ಟಚ್-ಬ್ಯಾಡ್ ಟಚ್ ಕುರಿತು ಜಿಲ್ಲೆಯಾದ್ಯಂತ ಅಭಿಯಾನ ನಡೆಸುವಂತೆ ನಿರ್ದೇಶನ ನೀಡಿದ ಪರಿಣಾಮ ಮಿಷನ್ ಸುರಕ್ಷಾ ಅಭಿಯಾನ ಆಯೋಜಿಸಿ 3.50 ಲಕ್ಷ ಮಕ್ಕಳಿಗೆ ಅರಿವು ಮೂಡಿಸಲಾಗಿದೆ. ಮೇಡಂ ಅವರ ಅವಧಿಯಲ್ಲಿ ಅಮೂಲ್ಯ ಶಿಶಿ ಗೃಹ ಮೂಲಕ 17 ಮಕ್ಕಳನ್ನು ಕಾನೂನು ಪ್ರಕಾರ ದತ್ತು ನೀಡಿ ಅವರ ಉಜ್ವಲ ಭವಿಷ್ಯಕ್ಕೆ ಕಾರಣರಾಗಿದ್ದಾರೆ. ಹುಟ್ದಬ್ಬ, ದೀಪಾವಳಿ ಹಬ್ಬ ಪೆÇೀಷಕರಿಲ್ಲದ ಮಕ್ಕಳೊಂದಿಗೆ ಆಚರಿಸಿ ನಮ್ಮೆಲ್ಲರಿಗೆ ಮಾದರಿಯಾಗಿದ್ದಾರೆ–ಮಂಜುಳಾ ವಿ. ಪಾಟೀಲ,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.






















