
ಕೋಲಾರ,ನ.೬- ಜನತೆಯ ಅಭ್ಯುದಯವೇ ನನ್ನ ಮೂಲ ಗುರಿ, ಮುಂಬರುವ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದು ಕಾಂಗ್ರೆಸ್ ಪಕ್ಷದಿಂದ ನನಗೆ ಟಿಕೆಟ್ ನೀಡಬೇಕೆಂದು ಸಮಾಜ ಸೇವಕ ಹಾಗೂ ಮೂನ್ ಸ್ಟಾರ್ ಹೋಟೆಲ್ ಮಾಲೀಕ ಸಯ್ಯದ್ ನಾಸೀರ್ ಮನವಿ ಮಾಡಿದರು.
ನಗರದ ೩೫ನೇ ವಾರ್ಡಿಗೆ ಸೇರುವ ಅಜಾದ್ ನಗರ ಹಾಗೂ ನಿಸಾರ್ ನಗರದ ಜನರ ಕುಂದು ಕೊರತೆಯನ್ನು ಆಲಿಸಿ ಮಾತನಾಡಿದ ಅವರು, ಈ ವಾರ್ಡಿನಲ್ಲಿ ಹುಟ್ಟಿ ಬೆಳೆದ ನಾನು, ಇಲ್ಲಿನ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಬಂದಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮುಂಬರುವ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನನಗೆ ಟಿಕೆಟ್ ನೀಡಿದ್ದಲ್ಲಿ ಖಂಡಿತ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಎಂಎಲ್ಸಿ ಅನಿಲ್ ಕುಮಾರ್ ಇವರು ನನಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರಂ ಕೊಡಿಸಲು ಮನಸ್ಸು ಮಾಡಬೇಕು. ಇಲ್ಲಿಯ ಜನತೆಯು ನನ್ನ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. ವಾರ್ಡಿನ ಜನರ ಕ್ಷೇಮಾಭಿವೃದ್ಧಿಗಾಗಿ ಹಲವಾರು ಸೇವೆಯನ್ನು ಮಾಡಿಕೊಂಡು ಬಂದಿದ್ದೇನೆ. ಮುಂದೆಯೋ ಅವರ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಒಂದು ವೇಳೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತನಾದರೆ, ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಗೆದ್ದು, ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ತಿಳಿಸಿದರು.
ಈ ವೇಳೆ ವಾರ್ಡಿನ ಹಿರಿಯರು, ಯುವಕರು, ಮಹಿಳೆಯರು, ಸಯ್ಯದ್ ನಾಸೀರ್ ಮಾಡಿರುವ ಸಮಾಜ ಸೇವೆಗಳನ್ನು ಕೊಂಡಾಡಿದರು ಹಾಗೂ ಇವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾರ್ಡಿನ ನಾಗರಿಕರಾದ ಇಲಿಯಾಜ್, ವಾಸೀದ್, ಮುಸ್ತಾರ್, ಅಪ್ಸರ್, ಹಮೀರ್ ಜಾನ್, ಖಾಜಾ, ಅಯ್ಯಪ್ಪ, ನಯಾಜ್ ಪಾಷ, ಜಾಕಿರ್, ಶಬ್ಬೀರ್, ನದೀಮ್, ಪಾಯಝ್, ಇಮ್ರಾನ್, ಮುಬಾರಕ್, ಸಾಧಿಕ್ ಮತ್ತಿತರರು ಹಾಜರಿದ್ದರು.
























