ನಾನು ಯಾರ ಸಂಧಾನಕಾರನೂ ಇಲ್ಲ

ಯಾದಗಿರಿ, ನ. ೨೪- ಎಐಸಿಸಿ ನನಗೆ ಸಂಧಾನಕಾರ ಜವಾಬ್ದಾರಿ ಕೊಟ್ಟಿಲ್ಲ. ನಾನು ಯಾರ ಪ್ರತಿನಿಧಿಯಾಗಿಯೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿಲ್ಲ. ಅವರು ನನ್ನ ಸಹೋದ್ಯೋಗಿ ಹಾಗಾಗಿ ಭೇಟಿ ಮಾಡಿದ್ದೇನೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದರು.


ಅಧಿಕಾರ ಹಂಚಿಕೆಯ ಬಿಕ್ಕಟ್ಟಿನಲ್ಲಿ ಎಐಸಿಸಿ ಸಂಧಾನಕಾರನ ಜವಾಬ್ದಾರಿ ನೀಡಿದೆಯೇ ಎಂಬ ಪ್ರಶ್ನೆಗೆ ಯಾದಗಿರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಐಸಿಸಿ ನನಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ. ಡಿ.ಕೆ. ಶಿಕುಮಾರ್ ಉಪಮುಖ್ಯಮಂತ್ರಿ ಇದ್ದಾರೆ. ನಮ್ಮ ಸಹೋದ್ಯೋಗಿ ಹಾಗಾಗಿ ಅವರ ಜತೆ ಮಾತನಾಡಿದ್ದೇನೆ. ಅದು ಜಿಬಿಎ ಚುನಾವಣೆಗೆ ವಿಚಾರವಾಗಿ ಅಷ್ಟೇ ಮಾತನಾಡಿರುವುದು ಬೇರೆ ಯಾವ ವಿಚಾರವನ್ನು ಚರ್ಚಿಸಿಲ್ಲ ಎಂದರು.


ನಾನು ಸಿಎಂ ಪ್ರತಿನಿಧಿಯಾಗಿಯೂ ಇಲ್ಲ, ಡಿಸಿಎಂ ಪ್ರತಿನಿಧಿಯಾಗಿಯೂ ಇಲ್ಲ. ಡಿಕೆಶಿ ಅವರಿಗೆ ತಾಳ್ಮೆಯಿಂದ ಇರು ಎಂದು ಹೇಳಲು ನಾನ್ಯಾರು. ನನಗೆ ಆ ಹಕ್ಕು ಕೊಟ್ಟಿದ್ದೀರಾ, ಅದನ್ನು ನಾನು ಹೇಗೆ ಹೇಳಲಿ. ಕಾಂಗ್ರೆಸ್‌ನಲ್ಲಿ ಬಂಡಾಯವೇ ಇಲ್ಲ, ಶಮನ ಎಲ್ಲಿಂದ. ಕಾಂಗ್ರೆಸ್ ಎಲ್ಲ ಶಾಸಕರದ್ದು ಒಂದೇ ಕುಟುಂಬ. ಯಾವುದೇ ಬಣ ಇಲ್ಲ ಎಂದರು.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಮ್ಮ ಮನೆಗೆ ಬಂದು ಮಾತನಾಡುವುದರಲ್ಲಿ ವಿಶೇಷ ಏನಿದೆ. ಅವರು ನನಗೆ ೪೦ ವರ್ಷಗಳಿಂದ ಸ್ನೇಹಿತರು. ನಾನು ಅವರ ಸಹೋದ್ಯೋಗಿ ಇದ್ದೇನೆ. ಹಾಗಾಗಿ ಅವರು ನಮ್ಮ ಮನೆಗೆ ಬಂದಿದ್ದಾರೆ ಅಷ್ಟೇ ಎಂದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರನ್ನು ನಾನು ಭೇಟಿ ಮಾಡಿರುವುದರಲ್ಲಿ ತಪ್ಪೇನು. ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಆಗಾಗ ಭೇಟಿ ಮಾಡುತ್ತೇನೆ. ಅದರಂತೆ ನಿನ್ನೆಯೂ ಭೇಟಿ ಮಾಡಿದ್ದೇನೆ ಎಂದರು.