ಸಮುದ್ರ ಸಂಪನ್ಮೂಲಗಳ ನಿರ್ವಹಣೆಗೆ ಹೈಡ್ರೋಗ್ರಫಿ ಅಗತ್ಯ

ಕಲಬುರಗಿ :ಜೂ.22: ಸಮುದ್ರ ಸಂಚರಣೆ, ಕರಾವಳಿ ಅಭಿವೃದ್ಧಿ ಮತ್ತು ಸಮುದ್ರ ಸಂಪನ್ಮೂಲಗಳ ನಿರ್ವಹಣೆ, ಸಮುದ್ರದ ಆಳ, ಉಬ್ಬರವಿಳಿತಗಳು, ಪ್ರವಾಹಗಳು ಮತ್ತು ಕೆಳಭಾಗದ ಲಕ್ಷಣಗಳಂತಹ ಅಂಶಗಳನ್ನು ಅಧ್ಯಯನ ಮಾಡಲು ಹೈಡ್ರೊಗ್ರಫಿ ಅಗತ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ್ ಹೇಳಿದರು. ‍‍ ನಗರದ ಆಳಂದ ರಸ್ತೆಯ ಜೆ.ಆರ್.ನಗರದಲ್ಲಿರುವ ‘ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಹೈಡ್ರೊಗ್ರಫಿ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದು ಹಡಗು ಸಂಚಾರ, ಬಂದರು ನಿರ್ಮಾಣ ಮತ್ತು ಕರಾವಳಿ ಪ್ರದೇಶಗಳ ರಕ್ಷಣೆಗಾಗಿ ಪ್ರಮುಖ ಮಾಹಿತಿಯನ್ನು ಒದಗಿಸುತ್ತದೆ. ಹೈಡ್ರೋಗ್ರಫಿಯು ಭೂಮಿಯ ಜಲಮೂಲಗಳ ಭೌತಿಕ ಲಕ್ಷಣಗಳನ್ನು ವಿವರಿಸುವ ವಿಜ್ಞಾನವಾಗಿದೆ. ಹೈಡ್ರೋಗ್ರಫಿ ಸಮುದ್ರ ಮತ್ತು ನದಿಗಳ ಪರಿಸರ ವ್ಯವಸ್ಥೆಗಳ ಅಧ್ಯಯನಕ್ಕೆ ಸಹಕಾರಿಯಾಗಿದೆ. ನೀರಿನ ಗುಣಮಟ್ಟ, ಜೀವಿಗಳ ಆವಾಸಸ್ಥಾನಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅಧ್ಯಯನ ಮಾಡಲು ಇದು ಸಹಾಯ ಮಾಡುತ್ತದೆ ಎಂದರು.
ಹೈಡ್ರೋಗ್ರಫಿಯು ಹವಾಮಾನ ಮಾದರಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಮುದ್ರ ತಾಪಮಾನ ಮತ್ತು ಲವಣಾಂಶದಂತಹ ಡೇಟಾವನ್ನು ಬಳಸಿಕೊಂಡು ಹವಾಮಾನ ಬದಲಾವಣೆಗಳ ಮೇಲೆ ಸಂಶೋಧನೆ ನಡೆಸಲು ಸಹ ಇದು ಸಹಾಯಕವಾಗಿದೆ. ಜಲಾನಯನ ಪ್ರದೇಶಗಳ ಅಧ್ಯಯನ, ಜಲವಿಜ್ಞಾನ, ಮತ್ತು ಸಾಗರ ವಿಜ್ಞಾನದಂತಹ ಕ್ಷೇತ್ರಗಳಲ್ಲಿ ಸಂಶೋಧನೆಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತದೆ.
ಒಟ್ಟಾರೆಯಾಗಿ, ಹೈಡ್ರೋಗ್ರಫಿ ಒಂದು ಬಹುಮುಖಿ ವಿಜ್ಞಾನವಾಗಿದ್ದು, ಇದು ಆರ್ಥಿಕ ಅಭಿವೃದ್ಧಿ, ಪರಿಸರ ಸಂರಕ್ಷಣೆ ಮತ್ತು ವೈಜ್ಞಾನಿಕ ಪ್ರಗತಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕಿಯರು ಪೃತ್ವಿ ಕೋರವಾರ, ಪೂಜಾ ಹೂಗಾರ, ನೇಹಾ, ಸಾನಿಯಾ ಶೇಖ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.