ಹಸಿವು,ಬಡತನ, ಅಪೌಷ್ಟಿಕತೆ ಮನುಕುಲಕೆ ಕಂಟಕ : ನ್ಯಾಯವಾದಿ ದಾನೇಶ ಅವಟಿ

ಸಂಜೆವಾಣಿ ವಾರ್ತೆ
ವಿಜಯಪುರ, ಡಿ.೨೧ : ಹಸಿವು, ಬಡತನ, ಅಪೌಷ್ಟಿಕತೆಗಳು ಮನುಕುಲಕ್ಕೆ ಅಂಟಿದ ಕಂಟಕಗಳಾಗಿದ್ದು, ಇವುಗಳನ್ನು ತೊಡೆದು ಹಾಕಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದುಪಯೋಗ ಪಡೆದುಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದು ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ಶುಕ್ರವಾರ ಸಾಯಂಕಾಲ ನಗರದ ಹೊರವಲಯ ಸ್ಪಿನ್ನಿಂಗ್ ಮಿಲ್ ರಸ್ತೆಯ ಲೀಡ್ಕರ್ ಕಾಲೋನಿಯ ಸಮುದಾಯ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆಯ ವಿಜಯಪುರ ತಾಲುಕಾ ವಲಯ ೧ ಯೋಗಾಪುರ ಕಾರ್ಯಕ್ಷೇತ್ರದ ಮರೆಮ್ಮ ದೇವಿ ಜ್ಞಾನವಿಕಾಸ ಕೇಂದ್ರದವರು ಏರ್ಪಡಿಸಿದ್ದ “ಪೌಷ್ಟಿಕ ಆಹಾರ ಮತ್ತು ಸದ್ಭಳಕೆ” ಕುರಿತು ಮಹಿಳೆಯರಿಗೆ ‘ಪ್ರಾತ್ಯಕ್ಷಿತೆ ಮತ್ತು ಬಹುಮಾನ ವಿತರಣೆ ಸಮಾರಂಭ’ವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು ವಿಶ್ವದಲ್ಲಿ ಇಂದು ಅಸಂಖ್ಯಾತ ಜನರು ಹಸಿವು, ಬಡತನ, ಅಪೌಷ್ಠಿಕತೆ ಕೊರತೆಯಿಂದ ಅನೇಕ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇವುಗಳು ವಿಶ್ವದ ವಿವಿಧ ರಾಷ್ಟ್ರಗಳ ಸಮಸ್ಯೆಯಾಗಿದ್ದು, ಜಾಗತಿಕ ಸವಾಲಾಗಿ ಪರಿಣಮಿಸಿವೆ. ಇವೂ ಒಂದಕ್ಕೊAದು ಪೂರಕ ಸಂಬAಧ ಹೊಂದಿದ್ದು, ಮನುಕುಲವನ್ನು ಬೆಚ್ಚಿ ಬೀಳಿಸಿವೆ. ಮನುಷ್ಯ ಉತ್ತಮ ಆಹಾರ, ನೀರು, ವಾಯುಸೇವನೆ ಕ್ರಮಬದ್ದ ಜೀವನಶೈಲಿ ಮತ್ತು ಸರಿಯಾದ ಆರೈಕೆ, ಔಷಧೋಪಚಾರದಿಂದ ಪರಿಹಾರ ಹೊಂದಲು ಸಾಧ್ಯ. ಇದಕ್ಕಾಗಿ ವಿಶ್ವಸಂಸ್ಥೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯವರು ರಾಜ್ಯದ ವಿವಿಧ ಮೂಲೆ ಮೂಲೆಗಳಲ್ಲಿ ಗ್ರಾಮ ಮಟ್ಟದಿಂದ ರಾಷ್ಟ ಮಟ್ಟದವರೆಗೂ ಇಂತಹ ಪಿಡುಗುಗಳನ್ನು ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವಜನಿಕರು ಅವರೊಂದಿಗೆ ಕೈ ಜೋಡಿಸಿ ‘ಆರೋಗ್ಯವಂತ ಸಮಾಜ ಸಮೃದ್ಧ ಸಶಕ್ತ ಭಾರತ ನಿರ್ಮಾಣವಾಗಿಸಲು ಕಂಕಣ ಬದ್ಧರಾಗಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಲಯ ಮೇಲ್ವಿಚಾರಕ ಸುಜಾತಾ ಕಿಶೋರ ತೊರಸಕರ್ ಅವರು ಮಾತನಾಡಿ, ‘ಆರೋಗ್ಯವಂತ ಶರೀರದಲ್ಲಿ ಆರೋಗ್ಯವಂತ ಮನಸ್ಸು’ ಎನ್ನುವಂತೆ ಸದೃಢವಾದ ಶರೀರದಿಂದ ಮಾನವ ಏನೆಲ್ಲಾ ಸಾಧಿಸಲು ಸಾಧ್ಯ. ಅಪೌಷ್ಟಿಕತೆ ಎಲ್ಲ ವಯೋಮಾನದವರಿಗೂ ಲಿಂಗ ಭೇದವಿಲ್ಲದೆ ಕಾಡುವ ಸಮಸ್ಯೆಯಾಗಿದ್ದು, ಮಕ್ಕಳಲ್ಲಿ ಹೆರಿಗೆಯಾದ ಮಹಿಳೆಯರಿಗೆ, ಅರವತ್ತೈದು ವರ್ಷದ ನಂತರ ಎಲ್ಲರಲ್ಲೂ ಕಾಣುವಂತಹ ಆರೋಗ್ಯ ಸಮಸ್ಯೆಯಾಗಿದ್ದು, ಸರಿಯಾದ ಚಿಕಿತ್ಸೆ, ಉತ್ತಮ ಆರೈಕೆ, ಕ್ರಮಬದ್ದ ಆಹಾರ ಪದ್ಧತಿ, ಯೋಗ, ವ್ಯಾಯಮ ಮಾಡುವುದರಿಂದ ನಿವಾರಣೆ ಮಾಡಲು ಸಾಧ್ಯ. ಈ ಕುರಿತು ಶ್ರೀ ಮಂಜುನಾಥ ಗ್ರಾಮಾಭಿವೃದ್ದಿ ಯೋಜನೆಯ ಸಂಸ್ಥೆಯ ಸೇವಾಕರ್ತರು ಅಗತ್ಯ ಮಾಹಿತಿ ಸಹಾಯ ಸಹಕಾರ ನೀಡುತ್ತಿದ್ದು, ಸಾರ್ವಜನಿಕರು ಸದುಪಯೋಗ ಪಡೆಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರೇಣುಕಾ ವಾಲಿಕಾರ ಮಾತನಾಡಿದರು.
ಸುಜಾತಾ ಸಾವಂತ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪ್ರೀತಿ ಗದ್ದಹಳ್ಳಿ (ತುರುಮುರಿ) ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ ರೇಖಾ ತಮಗೊಂಡ ನಿರೂಪಿಸಿದರು. ಮೇಲ್ವಿಚಾರಕಿ ಗಂಗಾ ದೊಡ್ಡುರು ವಂದಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕ ಜನ ಸಹೋದರಿಯರು ಎಳ್ಳು ಅಮವಾಸ್ಯೆಯ ಶುಭಾಶಯ ಕೋರಿದರು. ಪ್ರಾತ್ಯಕ್ಷಿತೆಯಲ್ಲಿ ಭಾಗವಾಗಿಸಿ ವಿವಿಧ ರೀತಿಯ ಪೌಷ್ಟಿಕ ಆಹಾರ ತಯಾರಿಸಿದ ಸ್ಪರ್ಧಾಳುಗಳಿಗೆ ಬಹುಮಾನ ವಿತರಿಸಲಾಯಿತು. ಚರಗ ಚೆಲ್ಲುವ ವಿಧಿ-ವಿಧಾನ ಹಾಗೂ ವಿವಿಧ ಭಕ್ಷ್ಯ ಭೋಜನಗಳನ್ನು ಸವಿಯುವುದರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.