Home ಜಿಲ್ಲೆ ಬೆಂಗಳೂರು ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೂರಾರು ಕೋಟಿ ಅಕ್ರಮ ಆರೋಪ: ತನಿಖೆಗೆ ಆಗ್ರಹ

ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೂರಾರು ಕೋಟಿ ಅಕ್ರಮ ಆರೋಪ: ತನಿಖೆಗೆ ಆಗ್ರಹ

ಬೆಂಗಳೂರು, ಜೂನ್ ೧: ನಗರದ ಪ್ರತಿಷ್ಠಿತ ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆರ್ಥಿಕ ಅಕ್ರಮಗಳು, ಅಧಿಕಾರ ದುರುಪಯೋಗ ಹಾಗೂ ನಿಯಮಬಾಹಿರ ಚಟುವಟಿಕೆಗಳು ನಡೆದಿವೆ ಎಂದು ಬಿಜೆಪಿ ಮುಖಂಡ ಎನ್ ಅರ್ ರಮೇಶ್ ಆರೋಪಿಸಿ ವಿವಿಧ ಪ್ರಾಧಿಕಾರಗಳಿಗೆ ದೂರು ಸಲ್ಲಿಸಿದ್ದಾರೆ.


ಸಂಸ್ಥೆಯ ಕಾರ್ಯದರ್ಶಿಯಾಗಿರುವ ಎಚ್.ಎಸ್. ಶ್ರೀಕಾಂತ್ ವಿರುದ್ಧ ಅಭಿವೃದ್ಧಿ ಕಾಮಗಾರಿಗಳ ವೆಚ್ಚ, ಸದಸ್ಯತ್ವ ಶುಲ್ಕ ಸಂಗ್ರಹ, ಜಿಎಸ್‌ಟಿ ಪಾವತಿ, ಕಟ್ಟಡ ನಿರ್ಮಾಣ ಹಾಗೂ ಭೂ ಖರೀದಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಗಂಭೀರ ಆರೋಪಗಳನ್ನು ದೂರಿನಲ್ಲಿ ಮಾಡಲಾಗಿದೆ.


ದೂರಿನಲ್ಲಿ ಉಲ್ಲೇಖಿಸಿರುವಂತೆ, ಕಳೆದ ಹತ್ತು ವರ್ಷಗಳಲ್ಲಿ ಸಂಸ್ಥೆಯ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸುಮಾರು ೩೫೦ ಕೋಟಿ ವೆಚ್ಚ ಮಾಡಲಾಗಿದೆ ಎಂದು ಲೆಕ್ಕ ತೋರಿಸಲಾಗಿದ್ದರೂ, ಅದರ ಸಮರ್ಪಕ ದಾಖಲೆಗಳು ಲಭ್ಯವಿಲ್ಲ ಎಂದು ಆರೋಪಿಸಲಾಗಿದೆ.


ಇದೇ ವೇಳೆ, ೨೦೨೧-೨೨ರಿಂದ ಸುಮಾರು ೨,೦೦೦ ಹೊಸ ಸದಸ್ಯರಿಂದ ತಲಾ ೨೦ ಲಕ್ಷ ಸದಸ್ಯತ್ವ ಶುಲ್ಕ ಹಾಗೂ ಶೇ.೧೮ರಷ್ಟು ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ಒಟ್ಟು ೫೪ ಕೋಟಿ ಜಿಎಸ್‌ಟಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸದಸ್ಯರಿಗೆ ಜಿಎಸ್‌ಟಿ ರಸೀದಿಗಳನ್ನೂ ನೀಡಿಲ್ಲ ಎಂದು ಹೇಳಲಾಗಿದೆ.


ಬೌರಿಂಗ್ ಇನ್‌ಸ್ಟಿಟ್ಯೂಟ್‌ನ ಲೀಸ್ ಷರತ್ತುಗಳಿಗೆ ವಿರುದ್ಧವಾಗಿ ‘ನೋ ಡೆವಲಪ್‌ಮೆಂಟ್ ಏರಿಯಾ’ ಎಂದು ಗುರುತಿಸಲಾದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ನಡೆಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸುಮಾರು ೯೦ ಕೋಟಿ ವೆಚ್ಚದ ಕಟ್ಟಡ ನಿರ್ಮಾಣ ಕಾಮಗಾರಿಗೆ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಅನುಸರಿಸಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಇದಲ್ಲದೆ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಗ್ರಾಮದಲ್ಲಿ ಸುಮಾರು ೮೮.೫೬ ಕೋಟಿ ವೆಚ್ಚದಲ್ಲಿ ೨೪ ಎಕರೆ ಭೂಮಿ ಖರೀದಿಸಿರುವ ವ್ಯವಹಾರದಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಮಾರ್ಗಸೂಚಿ ದರಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸುವ ಮೂಲಕ ಸಂಸ್ಥೆಗೆ ನಷ್ಟ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.


ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಪ್ರಶ್ನಿಸಿದ ಸದಸ್ಯರನ್ನು ಅಮಾನತುಗೊಳಿಸಲಾಗುತ್ತಿದೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ರಿಯಾಯಿತಿ ದರದಲ್ಲಿ ಸದಸ್ಯತ್ವ ನೀಡಲಾಗಿದೆ ಎಂಬ ಆರೋಪಗಳೂ ದಾಖಲಾಗಿವೆ.


ಈ ಸಂಬಂಧ ಪ್ರಧಾನ ಮಂತ್ರಿಗಳ ಕಚೇರಿಗೆ ಸಲ್ಲಿಸಲಾದ ದೂರಿನ ಆಧಾರದ ಮೇಲೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಬೌರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದಿರುವ ಎನ್ನಲಾದ ಅಕ್ರಮಗಳ ಕುರಿತು ಸಿಬಿಐ ಅಥವಾ ಸಿಐಡಿ ಮೂಲಕ ಸಮಗ್ರ ತನಿಖೆ ನಡೆಸಬೇಕು. ಅಲ್ಲದೆ, ಸಂಸ್ಥೆಯ ಆಡಳಿತವನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದರು..