ಮರಣಾನಂತರವೂ ಮಾನವಸೇವೆ :ಬ್ರಿಮ್ಸ್ನಲ್ಲಿ ದೇಹದಾನಿಗಳಿಗೆ ಗೌರವ

ಬೀದರ್:ಜ.೧೪:ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಸ್ವ-ಇಚ್ಛೆಯಿಂದ ಮರಣಾನಂತರ ದೇಹದಾನ ಮಾಡಿದ ದಾನಿಗಳನ್ನು ಗೌರವಿಸುವ ಕಾರ್ಯಕ್ರಮ ಜರುಗಿತು.
ಬಸವಕಲ್ಯಾಣದ ನಿವಾಸಿ ದಿವಂಗತ ಶ್ರೀಮತಿ ರತ್ನಮ್ಮಾ ಎನ್. ಅವುಸೆ ಅವರು ತಮ್ಮ ಮೃತದೇಹವನ್ನು ಬ್ರಿಮ್ಸ್ಗೆ ದಾನ ಮಾಡಿದ ಪ್ರಯುಕ್ತ, ಅವರ ಪುತ್ರರಾದ ಶ್ರೀ ಶಿವಪುತ್ರಪ್ಪಾ ತಂದೆ ನಾಗಶೆಟ್ಟೆಪ್ಪಾ ಅವುಸೆ ಹಾಗೂ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಅದೇ ರೀತಿ, ಬೀದರ್ ನಗರದ ಶಿವನಗರ ನಿವಾಸಿಗಳಾದ ನಿವೃತ್ತ ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಶ್ರೀ ಶಿವಕುಮಾರ ಎಚ್. ತಗಾರೆ, ಅವರ ಪತ್ನಿ ಶ್ರೀಮತಿ ನಿರ್ಮಲಾ ಎಸ್. ತಗಾರೆ, ತಾಯಿ ಶ್ರೀಮತಿ ಗುಂಡಮ್ಮಾ ಎಚ್. ತಗಾರೆ ಹಾಗೂ ನೌಬಾದ ನಿವಾಸಿ ಶ್ರೀಮತಿ ಕೌಶ್ಯಲ್ಯದೇವಿ ಬಿ.ಕೆ. ತಂಗಾ ಇವರನ್ನೂ ದೇಹದಾನಕ್ಕಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಿಮ್ಸ್ ನಿರ್ದೇಶಕರಾದ ಡಾ. ಶಿವಕುಮಾರ ಶೇಟಕಾರ, ಪ್ರಾಂಶುಪಾಲರಾದ ಡಾ. ರಾಜೇಶ ಪಾರಾ, ಮುಖ್ಯ ಆಡಳಿತಾಧಿಕಾರಿ ಶ್ರೀ ಶ್ರಿಕಾಂತ ವ್ಯೇರಾಗೆ ಹಾಗೂ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ ದೇಶಮುಖ ಅವರು ದೇಹದಾನಿಗಳಿಗೆ ಶಾಲು ಹೊದಿಸಿ, ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಿವಪುತ್ರಪ್ಪಾ ಅವುಸೆ ಅವರು, “ನನ್ನ ತಾಯಿಯ ಇಚ್ಛೆಯಂತೆ ಬ್ರಿಮ್ಸ್ ವೈದ್ಯಕೀಯ ಕಾಲೇಜಿನ ಎಂ.ಬಿ.ಬಿ.ಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ವೈಜ್ಞಾನಿಕ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ ಎಂಬ ನಂಬಿಕೆಯಿAದ ದೇಹದಾನ ಮಾಡಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ತಿಳಿಸಿದರು.
ಇನ್ನೊಬ್ಬ ದೇಹದಾನಿ ಶ್ರೀ ಶಿವಕುಮಾರ ಎಚ್. ತಗಾರೆ ಮಾತನಾಡಿ, “ದಾನಗಳಲ್ಲಿ ಶ್ರೇಷ್ಠ ದಾನ ದೇಹದಾನ ಎಂಬ ವಿಶ್ವಾಸದಿಂದ ನಾನು, ನನ್ನ ಪತ್ನಿ ಹಾಗೂ ತಾಯಿ ಸ್ವಯಂಪ್ರೇರಿತವಾಗಿ ದೇಹದಾನ ಮಾಡಲು ಮುಂದಾಗಿರುವುದು ಸಂತಸದ ಸಂಗತಿ” ಎಂದರು.
ಅAಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ ದೇಶಮುಖ ಅವರು ಮಾತನಾಡಿ, ಮರಣಾನಂತರ ದೇಹದಾನ ಮಾಡುವ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಮಹತ್ವದ ಕೊಡುಗೆ ನೀಡಬಹುದು. ಸಾರ್ವಜನಿಕರು ಸ್ವಯಂ ಇಚ್ಛೆಯಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಲು ಮುಂದಾಗಬೇಕೆAದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅನಾಟಮಿ ವಿಭಾಗದ ಪ್ರಾಧ್ಯಾಪಕರಾದ ಡಾ. ಡಿ.ಬಿ. ಪಾಟೀಲ, ಡಾ. ವರುಷಾಲಿ, ಡಾ. ರೋಷನ್, ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ದಿವ್ಯಜ್ಯೋತಿ, ಟ್ಯೂಟರ್ಸ್, ದೇಹದಾನ ಸಂಚಾಲಕರಾದ ನಾಗೇಂದ್ರ ಕಮಲಾಪುರೆ, ಶಿವಪುತ್ರ ಮುತ್ತತ್ತಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.