
ಹುಳಿಯಾರು, ಫೆ. ೩- ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ೧೩ ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಮಡಿಲಕ್ಕಿ ಸೇವೆಗೆ ಕಳುಹಿಸುವ ಮೂಲಕ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವ ಫೆ.೮ ರ ವರೆಗೆ ನಡೆಯಲಿದ್ದು, ಅಂದು ಕೋಡಿಪಾಳ್ಯ, ಲಿಂಗಪ್ಪನಪಾಳ್ಯ, ಕಾಮಶೆಟ್ಟಿಪಾಳ್ಯ, ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ನಡೆಯಲಿದೆ.
ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನೆರವೇರಿತು. ಫೆ. ೩ ರಂದು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಲಿದೆ.
ಫೆ.೪ ರಂದು ಹುಳಿಯಾರು ಗ್ರಾಮದೇವತೆ ದುರ್ಗಮ್ಮನವರು, ಹುಳಿಯಾರು ಕೆಂಚಮ್ಮದೇವಿ, ಸೋಮಜ್ಜನಪಾಳ್ಯದ ಅಂತರಘಟ್ಟೆ ಅಮ್ಮನವರು, ಗೌಡಗೆರೆ ದುರ್ಗಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕ ದೇವಿ, ಕೆ.ಸಿ.ಪಾಳ್ಯದ ಅಂತರಘಟ್ಟೆ ಅಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ.
ಫೆ. ೫ ರಂದು ಬೆಳಿಗ್ಗೆ ೭.೩೦ ಕ್ಕೆ ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ, ಫೆ. ೬ ರಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ, ಸಂಜೆ ಧೂತರಾಯಸ್ವಾಮಿ ಅವರ ಅದ್ದೂರಿ ಮಣೇವು ಕಾರ್ಯಕ್ರಮ, ಫೆ. ೭ ರಂದು ಕಂಕಣ ವಿಸರ್ಜನೆ, ಓಕಳಿ ಮತ್ತು ಫೆ. ೮ ರಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಕಳಸದ ದಿನದಂದು ಹುಳಿಯಾರಮ್ಮನವರ ಮೂಲಸ್ಥಾನದಲ್ಲಿ ಕಳಸ ಸ್ಥಾಪಿಸಿ ನಂತರ ೮.೩೦ ರಿಂದ ಕಳಸದ ನಡೆಮುಡಿಯೊಂದಿಗೆ ಸನ್ನಿಧಾನಕ್ಕೆ ಕಳಸಗಳ ಆಗಮನವಾಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವ ಯಶಸ್ವಿಗೊಳಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.




























