Home ಜಿಲ್ಲೆ ದಸರಾ ಪತಂಗ ಉತ್ಸವಕ್ಕೆ ಎರಡನೇ ದಿನವೂ ಜನಸಾಗರಬಣ್ಣಬಣ್ಣದ ಗಾಳಿಪಟಗಳ ಹಾರಾಟಕ್ಕೆ ಮಾರುಹೋದ ಮಕ್ಕಳು

ದಸರಾ ಪತಂಗ ಉತ್ಸವಕ್ಕೆ ಎರಡನೇ ದಿನವೂ ಜನಸಾಗರಬಣ್ಣಬಣ್ಣದ ಗಾಳಿಪಟಗಳ ಹಾರಾಟಕ್ಕೆ ಮಾರುಹೋದ ಮಕ್ಕಳು

ಬೀದರ್: ನಗರದ ಬಿ.ವಿ.ಬಿ. ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಬೀದರ್ ದಸರಾ ಪತಂಗ ಉತ್ಸವದ ಎರಡನೇ ದಿನವೂ ಬಣ್ಣಬಣ್ಣದ ಗಾಳಿಪಟಗಳ ಹಾರಾಟ, ಮಕ್ಕಳ ಸಂಭ್ರಮ ಹಾಗೂ ಸಾರ್ವಜನಿಕರ ಉತ್ಸಾಹ ಗಮನ ಸೆಳೆಯಿತು. ಆಕಾಶದಲ್ಲಿ ವಿವಿಧ ಆಕಾರ ಮತ್ತು ವಿನ್ಯಾಸಗಳ ಪತಂಗಗಳು ರಾರಾಜಿಸಿದರೆ, ಮೈದಾನದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಹೈದರಾಬಾದ್‍ನ ಕೊಹಿನೂರ್ ಕೈಟ್ ಕ್ಲಬ್ ಮತ್ತು ಇಂಡಿಯನ್ ಕೈಟ್ ಕ್ಲಬ್ ವತಿಯಿಂದ ಪ್ರದರ್ಶಿಸಲಾದ ವಿಭಿನ್ನ ಆಕಾರಗಳ ಹಾಗೂ ಆಕರ್ಷಕ ವಿನ್ಯಾಸಗಳ ಗಾಳಿಪಟಗಳು ಪ್ರೇಕ್ಷಕರನ್ನು ಬೆರಗುಗೊಳಿಸಿದವು. ಮಕ್ಕಳಿಗೆ ಗಾಳಿಪಟ ಹಾರಿಸುವ ಹೊಸ ಅನುಭವ ದೊರೆತರೆ, ಹಿರಿಯರು ತಮ್ಮ ಬಾಲ್ಯದ ಸವಿನೆನಪುಗಳನ್ನು ಮೆಲುಕು ಹಾಕಿದರು. ಮೊಬೈಲ್‍ಗಳ ಬಳಕೆಯ ನಡುವೆ ಮಕ್ಕಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಹಾಗೂ ಕುಟುಂಬದ ಸದಸ್ಯರನ್ನು ಒಟ್ಟುಗೂಡಿಸುವ ಈ ಉತ್ಸವ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಉತ್ಸವದ ಅಧ್ಯಕ್ಷರಾದ ಬಾಬು ವಾಲಿ ಹಾಗೂ ಅವರ ಪುತ್ರಿ, ಉತ್ಸವದ ಸಂಯೋಜಕಿ ದೀಪಾವಳಿ ವಾಲಿ ಬಲೂಡೆ ಅವರು ಸ್ವತಃ ಗಾಳಿಪಟ ಹಾರಿಸುವ ಮೂಲಕ ಗಮನ ಸೆಳೆದರು. ಉತ್ಸವದ ಜವಾಬ್ದಾರಿಗಳ ನಡುವೆಯೂ ತಂದೆ-ಮಗಳು ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು.
ಬೀದರ್‍ನ ಉದಯೋನ್ಮುಖ ಚಲನಚಿತ್ರ ನಟಿ ನೇಹಾ ಬಸುರಾಜ್ ಅವರು ಉತ್ಸವಕ್ಕೆ ಭೇಟಿ ನೀಡಿ ಗಾಳಿಪಟ ಹಾರಿಸಿದರು. ‘ಸೂರ್ಯ ಇನ್ ಗಾಂಧಿನಗರ’ ಚಿತ್ರದ ನಟಿಯಾದ ಅವರು ಉತ್ಸವದ ಅಧ್ಯಕ್ಷ ಬಾಬು ವಾಲಿ ಅವರೊಂದಿಗೆ ಪತಂಗ ಹಾರಿಸಿ ಸಂಭ್ರಮಿಸಿದರು.
ಉತ್ಸವದ ಎರಡನೇ ದಿನ ಸಮಿತಿಯ ಪದಾಧಿಕಾರಿಗಳು ಹಾಗೂ ಅವರ ಬೆಂಬಲಿಗರು ಉತ್ಸಾಹದಿಂದ ಪಾಲ್ಗೊಂಡು ಗಾಳಿಪಟ ಹಾರಿಸಿದರು. ಸಮಿತಿಯ ಉಪಾಧ್ಯಕ್ಷರಾದ ದೀಪಕ್ ವಾಲಿ ಮತ್ತು ವಿಜಯಕುಮಾರ್ ಪಾಟೀಲ್, ಕಾರ್ಯದರ್ಶಿಗಳಾದ ರವಿ ದುರ್ಗೆ, ಅರ್ಮೇಶ್ ಬಿರಾದರ್ ಚಿಟ್ಟಾ, ಪ್ರಭು ಮಡಿವಾಳ್, ಬಾಬುರಾವ್ ದಾನಿ, ಮಲಯ ಸ್ವಾಮಿ ಹಾಗೂ ಹುಷಣ್ ಪಾಠಕ್ ಸೇರಿದಂತೆ ಅನೇಕ ಪದಾಧಿಕಾರಿಗಳು ಭಾಗವಹಿಸಿದ್ದರು.
ಆಕಾಶದಲ್ಲಿ ಬಣ್ಣಗಳ ಚಿತ್ತಾರ ಮೂಡಿಸಿದ ಪತಂಗಗಳು, ಮಕ್ಕಳ ಮುಗ್ಧ ನಗು, ಸಾರ್ವಜನಿಕರ ಹರ್ಷೋದ್ಗಾರ ಹಾಗೂ ಸಂಘಟಕರ ಉತ್ಸಾಹ ಉತ್ಸವದ ಮೆರುಗನ್ನು ಹೆಚ್ಚಿಸಿದವು.