ಅಧಿವೇಶನಕ್ಕೆ ಭಾರಿ ಬಂದೋಬಸ್ತ್

ಡಿ.೮ ರಿಂದ ಚಳಿಗಾಲದ ಕಲಾಪ


ಬೆಳಗಾವಿ,ಡಿ.೩-
ಇದೇ ಡಿ. ೮ರಿಂದ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಿಂದೆಂದೂ ಕಂಡರಿಯದಂತೆ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ.


ನವದೆಹಲಿಯಲ್ಲಿ ಸಂಭವಿಸಿದ ಸ್ಫೋಟದ ಬೆನ್ನಲ್ಲೇ ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ಬಂದ ಎಚ್ಚರಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಭದ್ರತೆಯನ್ನು ಬಿಗಿಗೊಳಿಸಿ ಕಟ್ಟೆಚ್ಚರ ವಹಿಸಿವೆ.


ಅಧಿವೇಶನ ನಡೆಯುವ ವೇಳೆಗೆ ೬ರಿಂದ ೮ ಸಾವಿರ ಪೊಲೀಸರನ್ನು ನಿಯೋಜಿಸಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಧಿವೇಶನದಲ್ಲಿ ಸಚಿವಾಲಯ ಸಿಬ್ಬಂದಿ ಸೇರಿದಂತೆ ೧೨ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.


ನಿಷೇಧಾಜ್ಞೆ ಜಾರಿ:


ಅಧಿವೇಶನ ಅವಧಿಯಲ್ಲಿ ಸುವರ್ಣ ಸೌಧ ಆವರಣದಲ್ಲಿ ಸಾಲು ಸಾಲು ಪ್ರತಿಭಟನೆಗಳು ಕೂಡ ನಡೆಯುತ್ತವೆ. ಹೀಗಾಗಿ ಪ್ರತಿದಿನ ೫೦ ಸಾವಿರ ಜನ ಸೇರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಯಾವುದೇ ಅವಘಡವಾಗದಂತೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ.


ಅಧಿವೇಶನ ನಡೆಯುವ ದಿನಗಳಂದು
ಸುವರ್ಣ ವಿಧಾನಸೌಧದ ಸುತ್ತಮುತ್ತ ೩ ಕಿ.ಮೀ ವ್ಯಾಪ್ತಿಯಲ್ಲಿ ಸೆಕ್ಷನ್ ೧೪೪ ನೇ ವಿಧಿಯನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.


ಅಧಿಕಾರಿಗಳು ಪರಿಶೀಲನೆ:


ಅಧಿವೇಶನಕ್ಕೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಿದ್ಧತೆಗಳ ಬಗ್ಗೆ ಖುದ್ದು ಡಿಸಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ್ ಬೋರಸೆ, ಎಸ್ಪಿ ಡಾ. ಭೀಮಾಶಂಕರ ಗುಳೇದ್ ಹಾಗೂ ಸಿಇಒ ರಾಹುಲ್ ಶಿಂಧೆ ನಿನ್ನೆ ಪರಿಶೀಲಿಸಿದರು. ಸುವರ್ಣ ಸೌಧ ಆವರಣದಲ್ಲಿ ಉದ್ಯಾನವನ, ಧ್ವಜಸ್ತಂಭ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಕೂಡ ನಡೆಯಲಿದೆ.


ಡೋನ್ ನಿರ್ಬಂಧ:


ಸುವರ್ಣ ವಿಧಾನಸೌಧ ಪ್ರದೇಶದ ಭದ್ರತೆ ಹಿತದೃಷ್ಟಿಯಿಂದ ಅಧಿವೇಶನದ ಸಮಯದಲ್ಲಿ ಪೊಲೀಸ್ ಆಯುತರ ಕಚೇರಿಯಿಂದ ಅನುಮತಿಯಿಲ್ಲದೆ ಡೋನ್ ಬಳಕೆ ಮೇಲೂ ನಿರ್ಬಂಧ ಹೇರಲಾಗಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ತಡೆ, ಆಂಬುಲೆನ್ಸ್ ಮತ್ತು ಅಗತ್ಯ ಸೇವಾ ವಾಹನ ತಡೆಯುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ಎಚ್ಚರಿಸಿದ್ದಾರೆ.
೮ ಹೆಚ್ಚು ವಾಹನಗಳು ಈ ಹೆದ್ದಾರಿಯಲ್ಲಿ ಸಂಚರಿಸುವುದರಿಂದ, ಸಾರ್ವಜನಿಕರಿಗೆ ಅನನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ಅಹಿತಕರ ಘಟನೆಗಳ ಹಿನ್ನಲೆಯಲ್ಲಿ ದಿನಗಳ ಮುಂಚಿತವಾಗಿಯೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.


ಹಲವರಿಗೆ ಗಾಯ:


ಈ ನಿರ್ಧಾರದ ಹಿಂದೆ ಕಳೆದ ಅಧಿವೇಶನಗಳ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಈ ವರೆಗೆ ಅಧಿವೇಶನಕ್ಕೆ ಸಂಬಂಧಿಸಿದಂತೆ ೨೭ ಪ್ರಕರಣ ದಾಖಲಾಗಿದ್ದು, ೭೩ ಅಧಿಕಾರಿಗಳು ಮತ್ತು ಪೊಲೀಸರು ಹಾಗೂ ೨೧ ನಾಗರಿಕರು ಗಾಯಗೊಂಡಿದ್ದಾರೆ ಎಂದು ಹೇಳಿದರು


ವಿನಾಯಿತಿಗಳು:
ಈ ಆದೇಶ ಧಾರ್ಮಿಕ ಮೆರವಣಿಗೆ, ಅಂತ್ಯಕ್ರಿಯೆ, ವಿವಾಹ ಅಥವಾ ಕಾರ್ಯಕ್ರಮಗಳ ಮೆರವಣಿಗೆಗಳಿಗೆ ಅನ್ವಯಿಸುವುದಿಲ್ಲ, ಆದರೆ, ಇತರ ಫಾರ್ಮಿಕ ಇಂತಹ ಸಂದರ್ಭಗಳಲ್ಲಿಯೂ ಕಾನೂನು ಮತ್ತು ಸುವ್ಯವಸ್ತೆಗೆ ಧಕ್ಕೆಯಾಗದಂತೆ ನಿಯನು ಪಾಲಿಸುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಪೊಲೀಸ್ ಆಯುಕ್ತರ ಈ ನಿರ್ಧಾರ ಅಧಿವೇಶನ ತಾಂತಿಯುತವಾಗಿ ನಡೆಯಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಲಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಮಹಾಮೇಳಾವ್ ನಿಷೇಧ:


ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಸಿಬ್ಬಂದಿಗಳ ವಾಸ್ತವ್ಯಕ್ಕೆ ಈಗಾಗಲೇ ೩ ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮತ್ತೊಂದೆಡೆ ನಾಡದ್ರೋಹಿ ಎಂಇಎಸ್ ಸಂಸ್ಥೆ ನಡೆಸಲು ಯೋಜಿಸಿದ್ದ ‘ಮಹಾಮೇಳಾವ್’ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.

ಪ್ರತಿಕೃತಿ ದಹನಕ್ಕೆ ತಡೆ
ಪ್ರಚೋದನಕಾರಿ ಘೋಷಣೆ ಕೂಗುವುದು, ವ್ಯಕ್ತಿಯನ್ನು ಅವಮಾನಿಸುವ ಚಿತ್ರ. ಚಿಹ್ನೆ ಮತ್ತು ಪ್ರತಿಕೃತಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಕಲ್ಲು ಸ್ಪೋಟಕ ಅಥವಾ ಪಟಾಕಿ ಸಾಗಿಸುವುದರ ಮೇಲೂ ನಿರ್ಬಂಧ ಹೇರಲಾಗಿದೆ. ಪ್ರತಿಭಟನೆ ನಡೆಸಲು ಇಚ್ಛಿಸುವ ಸಂಘಟನೆಗಳು ಕಡ್ಡಾಯವಾಗಿ ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವಾನುಮತಿ ಪಡೆಯಬೇಕು.ಅನುಮತಿ ಪಡೆದವರಿಗೆ ಮಾತ್ರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗುತ್ತದೆ.