ಹುಡೇದ ಯಲ್ಲಮ್ಮ ಜಾತ್ರೆ:ಎಳ್ಳಚ್ಚಿದ ರೊಟ್ಟಿ-ಎಣ್ಣೆ ಬದನೆಕಾಯಿ ಸವಿದ ಭಕ್ತರು

ಸೈದಾಪುರ:ಜ.16:ಸಮೀಪದ ಬೆಳಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಆನೂರ.ಕೆ, ಬೆಳಗುಂದಿ, ಹೆಗ್ಗಣಗೇರಾ ಮತ್ತು ಸಾವೂರು ಗ್ರಾಮಗಳ ಆರಾಧ್ಯ ದೈವ. ಮೂರು ಸೀಮೆಯ ಅಡವಿ ಮಧ್ಯದಲ್ಲಿ ನೆಲೆಸಿರುವ ಯಲ್ಲಮ್ಮ, ಹುಡೇದ ಯಲ್ಲಮ್ಮದೇವಿ ಎಂದು ಪ್ರಸಿದ್ದಿ ಪಡೆದಿದ್ದಾಳೆ. ಜಾತ್ರೆಗೆ ಎಲ್ಲ ಧರ್ಮದ ಜನರು ಮತ್ತು ಹಲವು ಗ್ರಾಮಗಳಿಂದ ಭಕ್ತರು ಆಗಮಿಸಿ ಪ್ರೀತಿ, ಬಾಂಧವ್ಯ ಸಾಮರಸ್ಯದೊಂದಿಗೆ ಶ್ರದ್ಧಾ ಭಕ್ತಿಯಿಂದ ದೇವಿಗೆ ನಮಿಸಿ ಜಾತ್ರೆಯ ಉತ್ಸವವನ್ನು ನೆರವೇರಿಸಿದರು. ಹೂಮಾಲೆಗಳಿಂದ ದೇವಸ್ಥಾನ ಶೃಂಗರಿಸಲಾಗಿತ್ತು.
ಜಾತ್ರೆಯ ವಿಶೇಷತೆ ಎಂದರೆ ಪ್ರತಿ ವರ್ಷ ಸಂಕ್ರಾತಿ ಹಬ್ಬದಂದು ಬೆಳಿಗ್ಗೆ ಜಾತ್ರೆ ಆರಂಭವಾಗಿ ಸಂಜೆಯಾಗುತ್ತಿದ್ದಂತೆ ಜಾತ್ರೆ ಮುಕ್ತಾಯವಾಗುತ್ತದೆ. ಕೇವಲ ಒಂದು ದಿನದ ಜಾತ್ರೆಯಲ್ಲಿ ಅಪಾರ ಭಕ್ತರ ಮಧ್ಯೆ ನೂಕು-ನುಗ್ಗಲಿನಲ್ಲಿ ನಡೆಯುವ ಸಂಭ್ರಮದ ಜಾತ್ರೆಯಾಗಿದೆ. ದೂರದ ಮುಂಬೈ, ಬೆಂಗಳೂರು, ಹೈದ್ರಾಬಾದ್ ನಗರ ಪ್ರದೇಶಗಳಿಂದ ಅಲ್ಲದೆ ಸುತ್ತಲಿನ ವಿವಿಧ ಗ್ರಾಮಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ಕುಟುಂಬಸ್ಥರು, ನೆರೆಹೊರೆಯವರೊಂದಿಗೆ ಭೋಜನ ಸವಿಯುವುದು ವಿಶೇಷವಾಗಿತ್ತು.