ಫೈನಾನ್ಸ್ ಕಂಪನಿಯಿಂದ ಮನೆ ಜಪ್ತಿ, ವ್ಯಕ್ತಿ ದಿಢೀರ್ ಪ್ರತ್ಯಕ್ಷ

ವಿಜಯಪುರ,ಮೇ.೨೦– ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಆನಂದ ನಗರ ೨ ನೇ ಕ್ರಾಸ್ ಬಡಾವಣೆಯಲ್ಲಿ ವಾಸವಾಗಿದ್ದ ಅರುಣ್ ಕುಮಾರ್ ಎಂಬ ವ್ಯಕ್ತಿ ಚೋಳಮಂಡಲ ಫೈನಾನ್ಸ್ ನಲ್ಲಿ ಮನೆಗಾಗಿ ಸಾಲ ಪಡೆದುಕೊಂಡಿದ್ದು ಕಂತುಗಳನ್ನು ಸರಿಯಾಗಿ ಪಾವತಿಸದ ಕಾರಣ ಫೈನಾನ್ಸ್ ಕಂಪನಿಯವರು ನ್ಯಾಯಾಲಯದಿಂದ ಆದೇಶ ಪಡೆದುಕೊಂಡು ಬಂದು ಮನೆಯನ್ನು ಸೀಸ್ ಮಾಡಿದಾಗ ಇದ್ದಕ್ಕಿದ್ದಂತೆ ಮನೆಯೊಳಗೆ ಅಡಗಿದ್ದ ಅರುಣ್ ಕುಮಾರ್ ಕಿಟಕಿಯೊಳಗಿಂದ ತಲೆ ಹೊರ ಹಾಕಿ ತಾನು ಮನೆಯೊಳಗೆ ಇರುವುದಾಗಿ ತಿಳಿಸಿ ಎಲ್ಲರಿಗೂ ಅಚ್ಚರಿ ಹುಟ್ಟಿಸಿದನು.


ಈ ಸಂದರ್ಭದಲ್ಲಿ ಮಾತನಾಡಿದ ಪುರಸಭಾ ಸದಸ್ಯರಾದ ಹನೀಫುಲ್ಲ ರವರು ಚೋಳಮಂಡಲ ಫೈನಾನ್ಸ್ ರವರು ಮಾನವೀಯತೆ ಮರೆತು ಸಾಲ ಪಡೆದ ವ್ಯಕ್ತಿಯನ್ನು ಮನೆಯೊಳಗೆ ಕೂಡಿಹಾಕಿ ಸೀಸ್ ಮಾಡಿರುವುದು ಮಾನವೀಯ ಹಕ್ಕುಗಳ ಉಲ್ಲಂಘನೆಯಾಗಿದ್ದು ಅವರುಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಚೋಳಮಂಡಲ ಫೈನಾನ್ಸ್ ಪರವಾಗಿ ನ್ಯಾಯಾಲಯದ ಆದೇಶದೊಂದಿಗೆ ಬಂದಿದ್ದ ಬೆಂಗಳೂರು ಗ್ರಾಮಾಂತರ ಸಿಜೆಎಂ ಕೋರ್ಟ್ ನ ಕಮಿಷನರ್ ಉಮೇಶ್ ರವರು ಮಾತನಾಡಿ, ನ್ಯಾಯಾಲಯದ ತೀರ್ಪಿನ ಮೇರೆಗೆ ಫೈನಾನ್ಸ್‌ಗೆ ಕಂತು ಕಟ್ಟಲು ವಿಫಲರಾದ ಅರುಣ್ ಕುಮಾರ್ ರವರ ಮನೆಯನ್ನು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಸಂಪೂರ್ಣ ಮನೆ ಖಾಲಿ ಇರುವುದನ್ನು ವಿಡಿಯೋ ಚಿತ್ರೀಕರಣ ನಡೆಸಿ ಪಂಚನಾಮೆ ಮಾಡಿ ಸೀಸ್ ಮಾಡಲಾಗಿದ್ದು ನಮ್ಮಗಳನ್ನು ತಪ್ಪು ದಾರಿ ಹಿಡಿಸುವ ಸಲುವಾಗಿಯೇ ಅರುಣ್ ಕುಮಾರ್ ಮನೆಯೊಳಗೆ ಎಲ್ಲಿಯೂ ಕಾಣದಂತೆ ಬಚ್ಚಿಟ್ಟುಕೊಂಡಿದ್ದು, ನಂತರ ಕಿಟಕಿ ಮೂಲಕ ಕಾಣಿಸಿಕೊಂಡು ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾನೆಂದು ತಿಳಿಸಿದರು.


ಚೋಳಮಂಡಲ ಫೈನಾನ್ಸ್ ನ ಸಾಲ ವಸೂಲಾತಿ ಮುಖ್ಯ ಅಧಿಕಾರಿ ಗೋಪಿನಾಥ್ ರವರು ಮಾತನಾಡಿ, ಅರುಣ್ ಕುಮಾರ್ ರವರು ಚೋಳಮಂಡಲ ಫೈನಾನ್ಸ್ ನಿಂದ ಮನೆಯ ಮೇಲೆ ೨೦೧೯ ರಲ್ಲಿ ಸುಮಾರು ೧೫ ವರೆ ಲಕ್ಷ ರೂಗಳ ಸಾಲ ಪಡೆದುಕೊಂಡಿದ್ದು, ಒಂದು ವರ್ಷದ ಹಿಂದೆಯೇ ಸಾಲದ ಕಂತುಗಳನ್ನು ಕಟ್ಟದ ಕಾರಣ ವಿಷಯ ನ್ಯಾಯಾಲಯಕ್ಕೆ ಹೋಗಿದ್ದು, ಆಗಲೇ ಮನೆಯನ್ನು ಸೀಸ್ ಮಾಡಲಾಗಿದ್ದು, ನಂತರ ಹೈಕೋರ್ಟ್ ನ ಆದೇಶದ ಮೇರೆಗೆ ೩ ಲಕ್ಷ ರೂಗಳಂತೆ ಮೂರು ಕಂತು ಹಣ ಕಟ್ಟಲು ನ್ಯಾಯಾಲಯದ ಆದೇಶವಾಗಿದ್ದು, ಒಂದು ಬಾರಿ ಮೂರು ಲಕ್ಷ ರೂಗಳನ್ನು ಕಂತಾಗಿ ಕಟ್ಟಿ, ಸೀಸಾಗಿದ್ದ ಮನೆಯನ್ನು ಮತ್ತೆ ಬಿಡಿಸಿಕೊಂಡಿದ್ದು, ಉಳಿಕೆ ಎರಡು ಕಂತುಗಳನ್ನು ಕಟ್ಟದ ಕಾರಣ ಮತ್ತೆ ನ್ಯಾಯಾಲಯದಲ್ಲಿ ಮನೆ ಸೀಸ್ ಮಾಡಲು ಆದೇಶವಾಗಿದ್ದು, ನಾವು ಅಂದು ಯಾವ ಮನೆಯನ್ನು ಸೀಸ್ ಮಾಡಿದ್ದೆವೋ ಇಂದೂ ಸಹ ಅದೇ ಮನೆಯನ್ನು ಸೀಸ್ ಮಾಡಲಾಗಿದೆ ಎಂದು ತಿಳಿಸಿದರು.


ಇದೇ ಸಂದರ್ಭದಲ್ಲಿ ಇಸ್ಮಾಯಿಲ್ ಜಬಿವುಲ್ಲಾ ಎಂಬ ವ್ಯಕ್ತಿ ಬಂದು ಈ ಮನೆಯ ಮಾಲೀಕ ತಾನಾಗಿದ್ದು, ತನ್ನ ಮನೆಯನ್ನು ಅರುಣ್ ಕುಮಾರ್ ಎಂಬುವವರಿಗೆ ಬಾಡಿಗೆಗೆ ನೀಡಿದ್ದು, ನನ್ನ ಮನೆಯನ್ನು ಅವರು ಫೈನಾನ್ಸ್ ಕಂಪನಿಗೆ ಅಡಮಾನ ಇಡಲು ಹೇಗೆ ಸಾಧ್ಯವೆಂದು, ಪ್ರಶ್ನಿಸಿ, ೧೨.೦೭.೨೦೨೪ರಂದು ತನ್ನ ಹೆಸರಿಗೆ ಮೌಲಾ ಜಾನ್, ಗುಲ್ಜರ್ ಬೇಗಂ ಹಾಗೂ ಅವರ ಮಕ್ಕಳು ನೋಂದಾವಣೆ ಮಾಡಿಕೊಟ್ಟ ಪತ್ರಗಳನ್ನು ಪ್ರದರ್ಶಿಸಿದರು.


ಇದೇ ಸಂದರ್ಭದಲ್ಲಿ ಮನೆಯೊಳಗಿನ ವ್ಯಕ್ತಿಯನ್ನು ಹೊರಗೆ ಬರಲು ಫೈನಾನ್ಸ್ ಕಂಪನಿಯವರು ಒತ್ತಾಯ ಮಾಡಿದಾಗಲೂ ಸಹ ಪುರಸಭಾ ಸದಸ್ಯ ಹನಿ ಫುಲ್ಲ ಮತ್ತಿತರರು ಮಾನವೀಯತೆ ಮರೆತು, ವ್ಯಕ್ತಿಯನ್ನು ಮನೆಯೊಳಗೆ ಕೂಡಿಹಾಕಿ, ಸೀಸ್ ಮಾಡಿದ ಫೈನಾನ್ಸ್ ಕಂಪನಿಗಳವರ ವಿರುದ್ಧ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ನಂತರ ಸೀಜ್ ಮಾಡಿದ ಮನೆಯ ಬೀಗ ತೆರೆಯಬೇಕೆಂದು ಗಲಾಟೆ ಮಾಡಿದರು. ತದನಂತರ ದೇವನಹಳ್ಳಿ ತಾಲೂಕು ತಹಸಿಲ್ದಾರ್ ಬಾಲಕೃಷ್ಣರವರು ಆಗಮಿಸಿ, ಸೀಸ್ ಮಾಡಿದ ಮನೆಯನ್ನು ತೆರೆಸಿ ವ್ಯಕ್ತಿಯನ್ನು ಹೊರ ತಂದರು.


ತದನಂತರ ಮಾತನಾಡಿದ ತಹಸೀಲ್ದಾರ್ ಬಾಲಕೃಷ್ಣರವರು ಯಾರೇ ಆದರೂ ಮಾನವೀಯತೆ ಮರೆತು ವ್ಯಕ್ತಿಯನ್ನು ಒಳಗೆ ಕೂಡಿಹಾಕಿ ಬೀಗ ಜಡೆಯುವುದು ಸರಿಯಲ್ಲವೆಂದು ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.


ಆದರೂ ಸಾರ್ವಜನಿಕರು ತೆಗೆದುಕೊಂಡ ಸಾಲಗಳನ್ನು ಕ್ರಮಬದ್ಧವಾಗಿ ಕಂತುಗಳು ಕಟ್ಟಿಕೊಂಡು ಹೋದರೆ ಇಂತಹ ಪರಿಸ್ಥಿತಿ ಸಮಸ್ಯೆಗಳು ಬರುವುದಿಲ್ಲವೆಂದು ತಿಳಿಸಿದರು.


ತಾಲೂಕಿನಲ್ಲೆಡೆ ಕಳೆದ ಮೂರು ನಾಲ್ಕು ದಿನಗಳಿಂದ ಉತ್ತಮ ಮಳೆ ಬೀಳುತ್ತಿದ್ದು ಯಾವುದೇ ಅವಘಡಗಳು ಸಂಭವಿಸಿಲ್ಲವೆಂದು ಹವಾಮಾನ ಮುನ್ಸೂಚನೆ ರೀತಿ ಇನ್ನೂ ಐದು ದಿನ ಹೆಚ್ಚಿನ ಮಳೆ ಬೀಳಲಿದ್ದು, ಸಾರ್ವಜನಿಕರು ಮುಂಜಾಗರೂಕತೆ ವಹಿಸಬೇಕೆಂದು ತಾಲೂಕು ಆಡಳಿತ ದಿನದ ೨೪ ಗಂಟೆಗಳು ಇದರ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.