ಮದನೂರ ಗ್ರಾಮ ಪಂಚಾಯಿತಿಯಲ್ಲಿ ಮನೆ ಮಂಜೂರಾತಿ ಆದೇಶ ಪತ್ರ ವಿತರಣೆ

ಕಮಲನಗರ:ಫೆ.1: ತಾಲೂಕಿನ ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದನೂರ ಹಾಗೂ ಖತಗಾಂವ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ 2024-25ನೇ ಸಾಲಿನ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಯಿತು.
ಮದನೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಗುಂಡಪ್ಪಾ ಬೇಲ್ಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮನೆ ಮಂಜೂರಾತಿಯ ತಿಳುವಳಿಕೆ ಪತ್ರಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ಯೋಜನೆಯಡಿ ಮದನೂರ ಮತ್ತು ಖತಗಾಂವ ಗ್ರಾಮಗಳಿಗೆ ಒಟ್ಟು 239 ಮನೆಗಳು ಅನುಮೋದನೆಯಾಗಿದ್ದು, ಅರ್ಹರಾದ 187 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಸಂಸದ ಸಾಗರ್ ಈಶ್ವರ ಖಂಡ್ರೆ ಅವರ ಕಚೇರಿಯ ಸಿಬ್ಬಂದಿ ವರ್ಗ ಭಾಗವಹಿಸಿ, ಫಲಾನುಭವಿಗಳಿಗೆ ಯೋಜನೆಯ ವಿವರಗಳು ಹಾಗೂ ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಅಧ್ಯಕ್ಷೆ ಪೂಜಾ ಗುಂಡಪ್ಪಾ ಬೇಲ್ಲೆ ಮಾತನಾಡಿ, ಮದನೂರ ಮತ್ತು ಖತಗಾಂವ ಗ್ರಾಮಗಳನ್ನು ‘ಗುಡಿಸಲು ಮುಕ್ತ ಗ್ರಾಮ’ಗಳನ್ನಾಗಿಸುವ ಗುರಿಯೊಂದಿಗೆ ಪಾರದರ್ಶಕವಾಗಿ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ. ಮನೆ ನಿರ್ಮಾಣ ಕಾಮಗಾರಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮೇಲ್ವಿಚಾರಣೆ ವಹಿಸಬೇಕೆಂದು ಸೂಚಿಸಿದರು.
ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಮೊದಲ ಕಂತಾಗಿ 30,000 ರೂ. ಹಣ ಮನೆ ನಿರ್ಮಾಣ ಆರಂಭಕ್ಕೂ ಮುನ್ನವೇ ಜಮೆ ಆಗಲಿದೆ. ನಿರ್ಮಾಣ ಪ್ರಗತಿಯ ಆಧಾರದಲ್ಲಿ ಎರಡನೇ ಕಂತಿನಲ್ಲಿ 60,000 ರೂ. ಮತ್ತು ಮೂರನೇ ಕಂತಿನಲ್ಲಿ 30,000 ರೂ. ಸೇರಿ ಒಟ್ಟು 1,20,000 ರೂ. ಹಣ ಡಿಬಿಟಿ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಆದ್ದರಿಂದ ಮೊದಲ ಕಂತಿನ ಹಣ ಜಮೆಯಾಗುತ್ತಿದ್ದಂತೆಯೇ ಮನೆ ನಿರ್ಮಾಣ ಆರಂಭಿಸುವಂತೆ ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.
ಮನೆ ಹಂಚಿಕೆ ಹಾಗೂ ಕಂತಿನ ಹಣ ಬಿಡುಗಡೆ ಸಂಬಂಧ ಮಧ್ಯವರ್ತಿಗಳಿಗೆ ಹಣ ನೀಡಿ ಮೋಸ ಹೋಗಬಾರದೆಂದು ಅವರು ಮನವಿ ಮಾಡಿದರು. ಯೋಜನೆಯ ಸದುಪಯೋಗ ಪಡೆದು ಮನೆ ನಿರ್ಮಿಸಿಕೊಳ್ಳುವಂತೆ ಫಲಾನುಭವಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಹರಬಾಜಿ ಶಿಂಧೆ, ಸದಸ್ಯರಾದ ಇಸ್ಮಾಯಿಲ್ ಸೈಯದ್, ಶೋಭಾ ವಿಶ್ವನಾಥ್, ರಾಜಕುಮಾರ್ ಧರಣೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗಾಚಾರಿ ನರೋಜ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಗೋರಕ್ ನಾಥ್ ಸಾವಳೆ ನಿರೂಪಿಸಿದರು. ಕರ ವಸೂಲಿಗಾರ ರಾಹುಲ್ ಪಿಚರಟೆ ವಂದಿಸಿದರು.