
ಕಲಬುರಗಿ,ಜ.8: ಅಳಂದ ಠಾಣೆ ವ್ಯಾಪ್ತಿಯ 5 ವಿವಿಧ ಗ್ರಾಮಗಳ ಮನೆಕಳ್ಳತನ ಪ್ರಕರಣ ಬೇಧಿಸಿದ ಅಳಂದ ಪೊಲೀಸರು ಇಬ್ಬರನ್ನು ಬಂಧಿಸಿದ್ದು,ಬಂಧಿತರಿಂದ 10.35 ಲಕ್ಷ ರೂ ಮೌಲ್ಯದ ಚಿನ್ನ ನಗದುಹಣ ವಶ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಮಸೂರನಾಯಕ ತಾಂಡಾ ನಿವಾಸಿಗಳಾದ ಪ್ರಭು ಗಂಗಾರಾಮ ಚೌಹಾಣ ಮತ್ತು ಗಂಗಾಜಿ ಅಲಿಯಾಸ್ ಮೇಘನಾಥ ಈರಪ್ಪ ಅಲಿಯಾಸ್ ಶಾಲು ಪವಾರ ಎಂಬ ಇಬ್ಬರನ್ನು ಬಂಧಿಸಲಾಗಿದೆ.
ಜಂಬಗಾ ( ಆರ್) ಜವಳಗಾ, ಹೊದಲೂರು,ಖಜೂರಿ ಮೊದಲಾದ ಗ್ರಾಮಗಳ ಮನೆಗಳ್ಳತನ ಪ್ರಕರಣಗಳಲ್ಲಿ ಈ ಇಬ್ಬರ ಕೈವಾಡ ಇರುವದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಈ ಕಳ್ಳತನ ಪ್ರಕರಣ ಪತ್ತೆಗೆ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ,ಡಿಎಸ್ಪಿ ತಮ್ಮಾರಾಯ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಐ ಶರಣಬಸಪ್ಪ ಕೋಡ್ಲಾ ,ಪಿಎಸ್‍ಐ ಸಂಜೀವ ರೆಡ್ಡಿ ಮತ್ತು ಸಿಬ್ಬಂದಿಯವರು ಪ್ರಕರಣ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದುಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ವಿವರಿಸಿದರು.






















