
ನಾಗರಾಜ ಕುಂಬಾರ
ಕೊಲ್ಹಾರ,ಜು.5: ಪಟ್ಟಣದ ಕಸ್ತೂರಿಬಾಯಿ ಬಾಲಕಿಯರ ಹಾಸ್ಟೆಲ್‍ನಲ್ಲಿ ಭದ್ರತಾ ಕೊರತೆಯಿಂದಾಗಿ ವಿದ್ಯಾರ್ಥಿನಿಯರು ಅಸುರಕ್ಷಿತ ಪರಿಸ್ಥಿತಿಯಲ್ಲಿ ವಾಸಿಸುವಂತಾಗಿದೆ. ಹಾಸ್ಟೆಲ್ ಮುಂಭಾಗದ ಆವರಣದ ಸುತ್ತಲೂ ಗೇಟ್ ಇಲ್ಲದಿರುವುದರಿಂದ ಹೊರಗಿನವರು ಸುಲಭವಾಗಿ ಪ್ರವೇಶಿಸುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.ಕರ್ನಾಟಕ ಪೆÇಲೀಸ್ ಕಾಯ್ದೆ 1963, ಕಲಂ (4) ರ ಅಡಿಯಲ್ಲಿ, ವಸತಿ ಶಾಲೆಯ ಆವರಣವನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಹೊರತುಪಡಿಸಿ ಇತರರಿಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ, ಈ ನಿಯಮದ ಉಲ್ಲಂಘನೆಯಾಗಿ ಹೊರಗಿನವರು ಹಾಸ್ಟೆಲ್‍ಗೆ ಪ್ರವೇಶಿಸುತ್ತಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.”ಇದು ಬಾಲಕಿಯರ ಹಾಸ್ಟೆಲ್. ಗೇಟ್ ಇಲ್ಲದಿರುವುದರಿಂದ ಭದ್ರತೆ ಎಂಬ ಪದವೇ ಇಲ್ಲಿ ಅರ್ಥಹೀನವಾಗಿದೆ. ರಾತ್ರಿಯ ವೇಳೆ ಯಾರಾದರೂ ಒಳನುಗ್ಗಿದರೆ ಜವಾಬ್ದಾರಿ ಯಾರದು? ಇದು ಸಂಬಂಧಪಟ್ಟ ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸುತ್ತದೆ,” ಎಂದು ಸ್ಥಳೀಯ ನಿವಾಸಿಯೊಬ್ಬರು ಕಿಡಿಕಾರಿದ್ದಾರೆ.
ಕಸ್ತೂರಿಬಾಯಿ ಬಾಲಕಿಯರ ಹಾಸ್ಟೆಲ್‍ನಲ್ಲಿ ವಾಸಿಸುವ 70ಕ್ಕೂ ಅಧಿಕ ವಿದ್ಯಾರ್ಥಿನಿಯರು ಮೂಲಭೂತ ಸೌಕರ್ಯಗಳ ಕೊರತೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿನೀರು, ಗುಣಮಟ್ಟದ ಬೆಡ್‍ಗಳು, ಸ್ವಚ್ಛ ಶೌಚಾಲಯಗಳು ಮತ್ತು ಗುಣಮಟ್ಟದ ಆಹಾರದ ಕೊರತೆಯಿಂದ ವಿದ್ಯಾರ್ಥಿನಿಯರ ದೈನಂದಿನ ಜೀವನ ಹಾಗೂ ಶಿಕ್ಷಣ ಪ್ರಗತಿಯ ಮೇಲೆ ಗಂಭೀರ ಪರಿಣಾಮ ಬೀರಿದೆ.
ಹಾಸ್ಟೆಲ್‍ನಲ್ಲಿ ಬಿಸಿನೀರಿನ ವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ಚಳಿಗಾಲದಲ್ಲಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಮಸ್ಯೆಗಳ ಭೀತಿ ಎದುರಾಗಿದೆ. “ತಣ್ಣಗಿನ ನೀರಿನಿಂದ ಸ್ನಾನ ಮಾಡುವುದು ಕಷ್ಟವಾಗಿದೆ, ಇದರಿಂದ ಚಳಿಯಲ್ಲಿ ಆರೋಗ್ಯ ಕೆಡುವ ಆತಂಕವಿದೆ,” ಎಂದು ವಿದ್ಯಾರ್ಥಿನಿಯೊಬ್ಬರು ತಮ್ಮ ಗೋಳನ್ನು ಹಂಚಿಕೊಂಡರು. ಇದೇ ರೀತಿ, ಬೆಡ್‍ಗಳ ಕೊರತೆಯಿಂದಾಗಿ ನೆಲದ ಮೇಲೆ ಮಲಗುವಂತಾಗಿದ್ದು, ಬೆನ್ನುನೋವು ಮತ್ತು ದೈಹಿಕ ತೊಂದರೆಗಳಿಗೆ ಒಳಗಾಗಿದ್ದಾರೆ.
ಆಹಾರ ಮತ್ತು ನೈರ್ಮಲ್ಯ ಸಮಸ್ಯೆ:
ಹಾಸ್ಟೆಲ್‍ನಲ್ಲಿ ಒದಗಿಸುವ ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಪೌಷ್ಟಿಕತೆಯ ಕೊರತೆಯ ಬಗ್ಗೆ ವಿದ್ಯಾರ್ಥಿನಿಯರು ದೂರಿದ್ದಾರೆ. ಕೆಲವೊಮ್ಮೆ ಆಹಾರ ವಿಳಂಬವಾಗುವ ಅಥವಾ ಕೊರತೆಯಾಗುವ ಸಮಸ್ಯೆಯೂ ಇದೆ. ಶೌಚಾಲಯಗಳು ಮತ್ತು ಸ್ನಾನಗೃಹಗಳ ಸ್ವಚ್ಛತೆಯ ಕುರಿತೂ ದೂರುಗಳು ಕೇಳಿಬಂದಿದ್ದು, ಇದರಿಂದ ವಿದ್ಯಾರ್ಥಿನಿಯರಿಗೆ ಗಂಭೀರ ಅನಾನುಕೂಲವಾಗಿದೆ.
ಸಿಬ್ಬಂದಿಗಳ ಆರ್ಥಿಕ ಸಂಕಷ್ಟ:
ಹಾಸ್ಟೆಲ್ ಸಿಬ್ಬಂದಿಗಳಿಗೆ ಜನವರಿಯಿಂದ ವೇತನವಿಲ್ಲದಿರುವುದರಿಂದ ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾರೆ. “ಕೆಲಸಕ್ಕೆ ತಕ್ಕ ವೇತನವಿಲ್ಲದೆ ಜೀವನ ನಡೆಸಲು ತೊಂದರೆಯಾಗಿದೆ,” ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುರಕ್ಷತೆಯ ಆತಂಕ:
ಹಾಸ್ಟೆಲ್ ಮುಂಭಾಗದ ವಿಶಾಲವಾದ ಗ್ರೌಂಡ್ ಇದ್ದು ರಾತ್ರಿಯ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದೆ ಕತ್ತಲಿನ ಗೂಡಾಗಿದ್ದು, ವಿದ್ಯಾರ್ಥಿನಿಯರಿಗೆ ಸುರಕ್ಷತೆಯ ಆತಂಕವನ್ನುಂಟು ಮಾಡಿದೆ. ಈ ಗ್ರೌಂಡ್‍ನಲ್ಲಿ ಲೈಟಿಂಗ್ ವ್ಯವಸ್ಥೆ (ಐ-ಮ್ಯಾಕ್ಸ್) ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.